ಪ್ರವಾಸಿಗರಿಗೆ ಸೌಲಭ್ಯ, ವರದಿ ಸಲ್ಲಿಸಿ

ಚಿತ್ರದುರ್ಗ: ಕೋಟೆ ಬಳಿ ಪ್ರವಾಸಿಗರಿಗೆ ಉಸಿರಾಡಲು ಜಾಗವಿಲ್ಲದಂತಾಗಿದ್ದು, ಅವರಿಗೆ ಅಗತ್ಯ ಸವಲತ್ತು ಕಲ್ಪಿಸುವ ಸಂಬಂಧ ವಾರದೊಳಗೆ ವರದಿ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿ ಎ.ಬಿ.ವಿಜಯಕುಮಾರ್‌ಗೆ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಸೂಚಿಸಿದರು.

ಮೂಲ ಸೌಕರ್ಯ ಹಾಗೂ 8.32 ಕೋಟಿ ರೂ. ವೆಚ್ಚದಲ್ಲಿ ಚಂದ್ರವಳ್ಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೋಟೆ, ತಿಮ್ಮಣ್ಣ ನಾಯಕ ಕೆರೆ ಹಾಗೂ ಚಂದ್ರವಳ್ಳಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ಕುಮಾರ್ ಪುಷ್ಕರ್ ಜತೆಗೆ ಭೇಟಿ ನೀಡಿದ ವೇಳೆ ಮಾತನಾಡಿದರು.

ಕೋಟೆ ವೀಕ್ಷಿಸಿದ ಇಬ್ಬರು ಅಧಿಕಾರಿಗಳು, ಶೌಚಗೃಹ, ಸಂಪರ್ಕ ರಸ್ತೆ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಅನುದಾನ ಕೊಡಲಾಗುವುದು. ಹಣದ ಚಿಂತೆ ಬೇಡ, ಮೊದಲು ಸೂಕ್ತ ಜಾಗವನ್ನು ಗುರುತಿಸಿ, ಅಗತ್ಯ ಬಿದ್ದರೆ ಖರೀದಿಸಿ. ಈ ವಿಷಯಕ್ಕೆ ಸಂಬಂಧಿಸಿದಂತೆ ವಾರದೊಳಗೆ ವರದಿ ಕೊಡಿ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯಿಂದ ಕೋಟೆಯಲ್ಲಿ ಅಭಿವೃದ್ಧಿಗೆ 3.46 ಕೋಟಿ ರೂ. ಅನುದಾನ ಕೊಟ್ಟಿದೆ. ಈ ಕೆಲಸಗಳನ್ನು ಭಾರತೀಯ ಪುರಾತತ್ವ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಅಥವಾ ಪುರಾತತ್ವ ಇಲಾಖೆಯೇ ನಿರ್ವಹಿಸಲಿದೆ ಎಂದರು.

ಮತ್ತೊಂದು ಭಾಗದಲ್ಲೂ ಕೋಟೆಯಲ್ಲಿ ಪ್ರವಾಸಿಗರಿಗೆ ಪ್ರವೇಶಾವಕಾಶ ಹಾಗೂ ಪ್ರತ್ಯೇಕ ಟಿಕೆಟ್ ಕೌಂಟರ್ ಸ್ಥಾಪನೆ ಸಂಬಂಧ ಪರಿಶೀಲಿಸುವಂತೆ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ವಿಸಿಟರ್ಸ್‌ ಸೆಂಟರ್, ಕ್ಯಾಂಟಿನ್, ಗೋಪಾಲ ಸ್ವಾಮಿ ಹೊಂಡ, ಅಕ್ಕತಂಗಿಯರ ಹೊಂಡ, ಅರಮನೆ ಮೈದಾನ, ಮುರುಘಾ ಮಠ, ಒನಕೆ ಓಬವ್ವನ ಕಿಂಡಿ, ಗಾಳಿಗೋಪುರ, ಚಂದ್ರವಳ್ಳಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಸೇರಿದ 8 ಎಕರೆ ಪ್ರದೇಶದಲ್ಲಿ 8.32 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ಕೇಂದ್ರ, ಅಂಕಲಿ ಮಠದ ಗುಹೆಗೆ ಲೈಟಿಂಗ್, ಮ್ಯೂಸಿಯಂ ಸ್ಥಾಪನೆ ಕುರಿತಂತೆ ಸ್ಥಳ ಪರಿಶೀಲಿಸಿದರು.
ನಗರಸಭೆ ಆಯುಕ್ತೆ ಲಕ್ಷ್ಮೀದೇವಿ, ಭಾರತೀಯ ಪುರಾತತ್ವ ಇಲಾಖೆ ಜೆ.ರಂಗನಾಥ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಲೋಕೋಪಯೋಗಿ ಇಲಾಖೆ ಇಇ ಸತೀಶ್, ನಿರ್ಮಿತಿ ಕೇಂದ್ರದ ಅಧಿಕಾರಿ ಮೂಡಲಗಿರಿಯಪ್ಪ ಇತರರಿದ್ದರು.

Leave a Reply

Your email address will not be published. Required fields are marked *