ಹಾರ್ನ್ ಸದ್ದಿಗೆ ಬೆಚ್ಚಿದ ಖಾಕಿ ಪಡೆ

ಚಿತ್ರದುರ್ಗ: ಹಾರ್ನ್ ಗಲಾಟೆಯಿಂದಾಗಿ ನಗರದಲ್ಲಿ ಇತ್ತೀಚೆಗೆ ಉಂಟಾಗಿದ್ದ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತಿರುವ ಸಂಚಾರಿ ಪೊಲೀಸರು, ಸಂಚಾರ ಅವ್ಯವಸ್ಥೆ ಸರಿಪಡಿಸಲು ಮುಂದಾಗಿದ್ದಾರೆ.

ನಗರದ ಎಂ.ಜಿ.ಸರ್ಕಲ್, ಮೇದೆಹಳ್ಳಿರಸ್ತೆ, ಸಂತೆಹೊಂಡ ರಸ್ತೆ, ಜಿಲ್ಲಾ ಆಸ್ಪತ್ರೆ ಮೊದಲಾದ ವಾಹನ, ಜನ ದಟ್ಟಣೆ ಹಾಗೂ ಪ್ರಮುಖ ವಾಣಿಜ್ಯಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಅಂಗಡಿ ಮುಂಗಟ್ಟು, ಗೂಂಡಂಗಡಿ ಹಾಗೂ ಫುಟ್‌ಪಾತ್ ವ್ಯಾಪಾರಿಗಳಿಗೆ ಸಂಚಾರಿ ಪೊಲೀಸರು ನೋಟಿಸ್ ಕೊಡಲು ಆರಂಭಿಸಿದ್ದಾರೆ. ಈಗಾಗಲೇ ನೂರಕ್ಕೂ ಹೆಚ್ಚು ವರ್ತಕರಿಗೆ ನೋಟಿಸ್ ತಲುಪಿದೆ.

ಪೊಲೀಸರಿಂದ ನೋಟಿಸ್ ಬರುತ್ತಿದ್ದಂತೆ ಹಲವು ವರ್ತಕರು ಶಾಸಕರ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಗುರುವಾರ ಭೇಟಿ ಚರ್ಚಿಸಿದ್ದಾರೆ. ಬಡ ವರ್ತಕರಿಗೆ ತೊಂದರೆ ಆಗದಂತೆ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಡಿಸಿ, ಎಸ್ಪಿ ಅವರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರುವುದಾಗಿ ವರ್ತಕರಿಗೆ ಶಾಸಕರು ಭರವಸೆ ನೀಡಿದ್ದಾರೆ.

ಸಂಚಾರಿ ಪೊಲೀಸರು ತಿಂಗಳಿಂದ ಈಚೆಗೆ ಟ್ರಾಫಿಕ್ ವ್ಯವಸ್ಥೆ ಸರಿಪಡಿಸಲು ಪ್ರಯತ್ನ ಮುಂದುವರಿಸಿದ್ದು, ಎಂಟು ಸಿಸಿ ಕ್ಯಾಮರಾ ಸರಿಪಡಿಸಿದ್ದಾರೆ. ಅಲ್ಲಲ್ಲಿ ಹೊಸ ರಸ್ತೆ ವಿಭಜಕ ಹಾಕುತ್ತಿದ್ದಾರೆ. 1996-97 ಚಿತ್ರದುರ್ಗ ನಗರದೊಳಗೆ ಬಸ್‌ಗಳೂ ಸೇರಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿತ್ತಂತೆ. ಆದರೆ, ನಂತರದಲ್ಲಿ ಈ ನಿಷೇಧ ಸಡಿಲಕೊಂಡಿದೆ. ಇದೀಗ ಚಳ್ಳಕೆರೆ ಗೇಟ್‌ನಿಂದ ಮಾಳಪ್ಪನಹಟ್ಟಿವರೆಗೆ ರಸ್ತೆ ವಿಸ್ತರಣೆ ಪ್ಲಾನ್‌ನಂತೆ ಪ್ರವಾಸಿ ಮಂದಿರದವರೆಗೆ ಕಾಮಗಾರಿ ಆರಂಭವಾಗಿದೆ.

ರಸ್ತೆ ವಿಸ್ತರಣೆ: ಪ್ರವಾಸಿ ಮಂದಿರದಿಂದ ಮಾಳಪ್ಪನಹಟ್ಟಿವರೆಗೆ ಕಾಮಗಾರಿಗೆ ಟೆಂಡರ್ ಆಗಿದೆ. ಆದರೆ, ಪ್ರವಾಸಿ ಮಂದಿರದಿಂದ ಕನಕ ವೃತ್ತದವರೆಗೆ ಕಟ್ಟಡಗಳನ್ನು ಹೊಡೆಯಬೇಕಿದ್ದು, ಮಾರ್ಕಿಂಗ್ ಇತ್ಯಾದಿ ಕುರಿತಂತೆ ಡಿಸಿ, ಎಸ್ಪಿ ಹಾಗೂ ಶಾಸಕರ ಸಭೆಯಲ್ಲಿ ಚರ್ಚಿಸಬೇಕಿದೆ. ಸದ್ಯ ಕನಕ ವೃತ್ತದಿಂದ ಮಾಳಪ್ಪನಹಟ್ಟಿವರೆಗೆ ವಿಸ್ತರಣೆ ಕಾಮಗಾರಿ ಆರಂಭವಾಗಲಿದೆ.

ಅಯ್ಯಣ್ಣ ಪೇಟೆ ಬಳಿ ಹಳೆಯ ಮಾರುಕಟ್ಟೆ ಕೆಡವಿ, ಚಿಕ್ಕ ಚಿಕ್ಕ ದಾಸ್ತಾನು ಮಳಿಗೆಗಳ ಸಹಿತ ಹೊಸ ಮಾರುಕಟ್ಟೆ ನಿರ್ಮಾಣ, ಗಾಯತ್ರಿ ಸರ್ಕಲ್‌ನಿಂದ ಜಿಲ್ಲಾ ಗ್ರಂಥಾಲಯದವರೆಗೆ ರಸ್ತೆ ಅಭಿವೃದ್ಧಿ, ವಾಸವಿ ವೃತ್ತ ಹಾಗೂ ಗಾಯತ್ರಿ ಸರ್ಕಲ್ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 2.15 ಕೋಟಿ ರೂ. ಅನುದಾನ ಭರಿಸಲಾಗುತ್ತಿದೆ.

ಸಂತೆಹೊಂಡ ರಸ್ತೆ ಅಭಿವೃದ್ಧಿ ಕೆಲಸವನ್ನು 10 ದಿನದೊಳಗೆ ಪೂರ್ಣಗೊಳಿಸಲಾಗುವುದು. ಬಸವೇಶ್ವರ ಸರ್ಕಲ್‌ನಿಂದ ಗಾಯತ್ರಿ ಸರ್ಕಲ್ ವರೆಗೆ ರಸ್ತೆ ಕಾಮಗಾರಿಗೆ ಪೂರ್ಣಗೊಳಿಸಲು ಹಣದ ಕೊರತೆ ಎದುರಾಗಿದೆ. ಪ್ರವಾಸಿ ಮಂದಿರದಿಂದ ಕನಕ ವೃತ್ತದವರೆಗೆ ರಸ್ತೆ ಅಗಲೀಕರಣ,ಕುಡಿವ ನೀರು ಮೊದಲಾದ ಕೆಲಸಗಳ ಕುರಿತಂತೆ ಜೂನ್ 18ರಂದು ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

Leave a Reply

Your email address will not be published. Required fields are marked *