ಪ್ರತಿಷ್ಠಾಪನಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ

ಚಿತ್ರದುರ್ಗ: ಗೋನೂರಿನ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸೂರ್ಯ, ಗಣಪತಿ, ಶಿವ ವಿಷ್ಣು ಸಹಿತ ರಾಜರಾಜೇಶ್ವರಿ ದೇವರು ಪ್ರತಿಷ್ಠಾಪನಾ ಮಹೋತ್ಸವಕ್ಕೆ ಶನಿವಾರ ವಿಧ್ಯುಕ್ತ ಚಾಲನೆ ದೊರೆಯಿತು.

ಸ್ವರ್ಣವಲ್ಲೀ ಮಠದ ಆಸ್ಥಾನ ವಿದ್ವಾಂಸ ಬಾಲಚಂದ್ರಶಾಸ್ತ್ರಿಗಳ ನೇತೃತ್ವದಲ್ಲಿ ಬೆಳಗ್ಗೆ ಗುರುವಂದನೆ, ಗಣಪತಿ ಪೂಜೆ, ಪುಣ್ಯಾಹ, ನಾಂದೀ, ಗಂಗಾ ಪೂಜೆ, ಮಹಾ ಸಂಕಲ್ಪ, ನವಗ್ರಹ ಹೋಮ, ಮಹಾಗಣಪತಿ ಹೋಮ, ಚತುರ್ವೇದ ಪಾರಾಯಣ, ಸೂರ‌್ಯಜಪ, ಸೂರ‌್ಯ ಸೂಕ್ತ, ಅಥರ್ವ ಪಾರಾಯಣ ನಡೆದವು.

ಸಂಜೆ 5.30 ರಿಂದ ಪುಣ್ಯಾಹ, ಯಾಗಶಾಲಾ ಪ್ರವೇಶ, ದಿಕ್ಪಾಲಕ ಪ್ರಾರ್ಥನೆ, ಅಷ್ಟಮೂರ್ತಿ ಪ್ರಾರ್ಥನೆ, ಮಂಡಲ ದರ್ಶನ, ಕಲಶ ಸ್ಥಾಪನೆ, ಭೂಪರಿಗ್ರಹ, ಗೇಹ ಪರಿಗ್ರಹ, ಗೋಪೂಜೆ, ರಾಕ್ಷೋಘ್ನ ಹವನ, ವಾಸ್ತು ಹೋಮ, ಮಹಾಸುದರ್ಶನ ಹವನ, ದಿಶಾ ಹೋಮ, ವಾಸ್ತು ಪೂಜೆ, ಬಲಿಹರಣ, ಉದಕ ಶಾಂತಿ ಹಾಗೂ ರಾಕ್ಷೋಘ್ನ ಪಠಣ ನಡೆಯಿತು.

ಶಿರಸಿಯ ಸ್ವರ್ಣವಲ್ಲಿ ಮಠ, ಕುಂದಾಪುರ ಹಾಗೂ ಬೆಂಗಳೂರಿನ 40 ಪುರೋಹಿತರು ಪಾಲ್ಗೊಂಡಿದ್ದರು. ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ನಾಗರಾಜ್‌ಭಟ್, ಕಾರ್ಯದರ್ಶಿ ಅನಂತಭಟ್, ಮಾರುತಿ ಮೋಹನ್, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ಮಾಧ್ವ ಮಹಾಸಭಾ ಪದಾಧಿಕಾರಿಗಳ ಭೇಟಿ: ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಮುರುಳೀಧರ್, ಉಪಾಧ್ಯಕ್ಷ ಅಶ್ವತ್ಥನಾರಾಯಣ, ಖಜಾಂಚಿ ವೈ.ರಾಮಚಂದ್ರ ಶನಿವಾರ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್ ಭಟ್ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿದರು. ಮಾಧ್ವ ಮಹಾಸಭಾ ಜಿಲ್ಲಾಧ್ಯಕ್ಷ ಹುಲಿರಾಜ್ ಜೋಯಿಸ್, ಶ್ರೀ ಹರಿವಾಯು ಸೇವಾಸಂಘದ ಅಧ್ಯಕ್ಷ ಟಿ.ಕೆ.ನಾಗರಾಜ್, ವಾಸುದೇವ, ಗೋಪಾಲಕೃಷ್ಣ, ಮಾರುತಿಮೋಹನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *