ನೀರಿನ ಸಮಸ್ಯೆ ನಿವಾರಣೆ ಕೋರಿ ತಾಪಂಗೆ ಮುತ್ತಿಗೆ

ಹೊಸದುರ್ಗ: ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಆಗ್ರಹಿಸಿ ತಾಲೂಕಿನ ಹೊನ್ನೇನಹಳ್ಳಿ ಗ್ರಾಮಸ್ಥರು ಪಟ್ಟಣದ ತಾಪಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಗ್ರಾಮದಲ್ಲಿ ಮೂರು ತಿಂಗಳಿಂದ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ನೀರಿಲ್ಲದೇ ಜನ-ಜಾನುವಾರು ಪರದಾಡುತ್ತಿದ್ದಾರೆ. ನೀರಿಗಾಗಿ ಅಕ್ಕಪಕ್ಕದ ಹಕ್ಕಿತಿಮ್ಮಯ್ಯನಹಟ್ಟಿ, ನರಸೀಪುರ ಹಾಗೂ ದೇವಪುರಕ್ಕೆ ಅಲೆದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಸ್ಥಳೀಯ ಆಡಳಿತ ಉದಾಸೀನ ಮಾಡುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿಲ್ಲದಿದ್ದರೂ 5 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ಲೈನ್ ನಿರ್ಮಿಸಿ ಅನುದಾನ ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿದರು.

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಕೊಳವೆಬಾವಿ ಕೊರೆಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿ ವಿಫಲರಾದರು. ನಂತರ, ಶಾಸಕ ಗೂಳಿಹಟ್ಟಿ ಡಿ.ಶೇಖರ್ ಆಗಮಿಸಿ 2 ಕೊಳವೆಬಾವಿ ಕೊರೆಸುವ ಭರವಸೆ ನೀಡಿದರು.

ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಮೂರು ತಿಂಗಳಲ್ಲಿ 300 ಕೊಳವೆ ಬಾವಿ ಕೊರೆಸಲಾಗಿದೆ. ಸರ್ಕಾರ ಬಿಲ್ ಪಾವತಿಸುವ ಬದಲು ಹೊಸದಾಗಿ ಟೆಂಡರ್ ಕರೆಯಲು ಮುಂದಾಗಿದೆ. ಇದರಿಂದ ಹೊಸ ಕೊಳವೆಬಾವಿ ಕೊರೆಸಲು ಸಮಸ್ಯೆಯಾಗಿದೆ. ನೀರಿನ ಸಮಸ್ಯೆ ಉದಾಸೀನ ಮಾಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

ಕರವೇ ತಾಲೂಕು ಅಧ್ಯಕ್ಷ ಲೋಕೇಶ್, ಹನುಮಂತಪ್ಪ, ರವಿ, ಹಾಲೇಶ, ವಿರೂಪಾಕ್ಷಪ್ಪ, ನಾಗರಾಜಪ್ಪ, ರಂಗನಾಥ, ವಿ. ಲತಾ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *