ಸೂಳೆಕೆರೆ ನೀರಿಗಾಗಿ ಮಾತಿನ ಚಕಮಕಿ

ಚಿತ್ರದುರ್ಗ: ಜಗಳೂರು ಪಟ್ಟಣಕ್ಕೆ ಪೂರೈಕೆ ಆಗುವ ಸೂಳೆಕೆರೆ ಪೈಪ್‌ಲೈನ್‌ನಿಂದ ಸಂಪರ್ಕ ಪಡೆಯಲು ಯತ್ನಿಸಿದ ಮೆದೇಹಳ್ಳಿ ಸುತ್ತಲಿನ ನಿವಾಸಿಗಳ ಯತ್ನಕ್ಕೆ ಜಗಳೂರು ನಿವಾಸಿಗಳು ಅಡ್ಡಿಪಡಿಸಿದ್ದು, ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ನಗರದ ಜೆಎಂಐಟಿ ಸರ್ಕಲ್ ಬಳಿ ಸೂಳೆಕೆರೆ ಪೈಪ್ ಮೂಲಕ ತಮ್ಮ ಬಡಾವಣೆಗೆ ಸಂಪರ್ಕ ಪಡೆಯಲು ತರಳಬಾಳು ನಗರ, ಈಶ್ವರ ಬಡಾವಣೆ, ಮೆದೇಹಳ್ಳಿ, ಮರುಳಪ್ಪ, ಮರುಳಸಿದ್ದೇಶ್ವರ ಬಡಾವಣೆ ನಿವಾಸಿಗಳು ಬುಧವಾರ ಪ್ರಯತ್ನ ನಡೆಸಿದರು.

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಗಳೂರು ಪಟ್ಟಣದ ಕೆಲ ನಿವಾಸಿಗಳು ಹಾಗೂ ನೀರಗಂಟಿಗಳು ಪೈಪ್‌ಲೈನ್ ಸಂಪರ್ಕ ಕಾರ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಎರಡು ಗುಂಪುಗಳ ಮಧ್ಯೆ ತೀವ್ರ ಮಾತಿನಚಕಮಕಿ ನಡೆಯಿತು.

ಜಗಳೂರು ಪಟ್ಟಣಕ್ಕಾಗಿಯೇ ಈ ಪೈಪ್‌ಲೈನ್ ಮೀಸಲು. ಇದರಿಂದ ಕಾನೂನುಬಾಹಿರವಾಗಿ ಸಂಪರ್ಕ ಪಡೆಯಲು ಅವಕಾಶ ಸಲ್ಲದು. ಇದರಿಂದ ನಮ್ಮೂರಿನ ಜನರು ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಲಿದೆ ಎಂದು ತಿಳಿಸಿದರು.

ನಮ್ಮ ಬಡಾವಣೆಗಳಲ್ಲೂ ನೀರಿನಲ್ಲಿ. ಬಡಾವಣೆಯಲ್ಲಿನ ಕೊಳವೆಬಾವಿಗಳಿಂದ ಪ್ರತಿನಿತ್ಯ ನೂರಾರು ಟ್ಯಾಂಕರ್ ನೀರು ಮಾರಾಟ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಬಹುತೇಕ ನಮ್ಮ ಬಡಾವಣೆಗಳಲ್ಲಿನ ಬೋರ್‌ವೆಲ್‌ಗಳು ಬತ್ತು ಹೋಗಿವೆ. ಇದರಿಂದ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನೀರು ಮಾರಾಟ ದಂಧೆಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಸ್ಪಂದನೆ ದೊರೆತಿಲ್ಲ. ಇದರಿಂದ ನಮಗೆ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಲೇ ಇದೆ.

ಈ ಕಾರಣಕ್ಕೆ ನಮ್ಮ ಬಡಾವಣೆ ಜನರ ಅನುಕೂಲಕ್ಕಾಗಿ ಕುಡಿಯುವ ನೀರು ಪಡೆಯಲು ಪೈಪ್‌ಲೈನ್ ಮೂಲಕ ತರಳಬಾಳು ನಗರದಲ್ಲಿರುವ ಓವರ್‌ಹೆಡ್ ಟ್ಯಾಂಕ್‌ಗೆ ಸಂಪರ್ಕ ಪಡೆದುಕೊಳ್ಳುತ್ತಿದ್ದೇವೆ. ನೀರು ಪಡೆಯುವುದು ಪ್ರತಿಯೊಬ್ಬರ ಹಕ್ಕು. ಇದಕ್ಕೆ ಅಡ್ಡಿ ಪಡಿಸುವುದು ಮಾನವೀಯ ನೆಲೆಗಟ್ಟಿನಲ್ಲಿ ಸರಿ ಅಲ್ಲ ಎಂದು ತಿಳಿಸಿದರು.

ಈ ವೇಳೆ ಹಿರಿಯರ ಮಧ್ಯಸ್ಥಿಕೆಯಲ್ಲಿ ಸಂಜೆಯವರೆಗೂ ರಾಜೀ ಸಂಧಾನ ಕಾರ್ಯ ನಡೆದಿದ್ದು, ಎರಡು ಗುಂಪುಗಳ ಮಧ್ಯೆ ಬಿಗಿಪಟ್ಟಿನಿಂದ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ ಉಜ್ಜಿನಿಸ್ವಾಮಿ, ಮಾಜಿ ಅಧ್ಯಕ್ಷ ವಿಜಯಕುಮಾರ್, ನಿವಾಸಿಗಳಾದ ವೆಂಕಟೇಶ್, ಜಡೇಶ್, ದಿನೇಶ್ ಇತರರಿದ್ದರು.