More

    ಮತಪಟ್ಟಿ ಯಶಸ್ವಿಗೆ ಕೈಜೋಡಿಸಿ

    ಚಿತ್ರದುರ್ಗ: ಜಿಲ್ಲಾದ್ಯಂತ ಚಾಲ್ತಿಯಲ್ಲಿರುವ ಮತಪಟ್ಟಿ ಪರಿಷ್ಕರಣೆ, ಮತದಾರ ನೋಂದಣಿ ಕಾರ್ಯದ ಶೇ.100 ಯಶಸ್ವಿಗೆ ಕೈ ಜೋಡಿಸುವಂತೆ ಡಿಸಿ ಆರ್.ವಿನೋತ್ ಪ್ರಿಯಾ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

    ಜಿಲ್ಲಾ ಸ್ವೀಪ್ ಸಮಿತಿ ಜ.25ರಂದು ಆಚರಿಸುವ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ, ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.

    ಜಿಲ್ಲೆಯಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಜ.15ರ ವರೆಗೆ ನೋಂದಣಿ, ತಿದ್ದುಪಡಿ, ಮತಪಟ್ಟಿಯಿಂದ ಕೈಬಿಡಲು ಕಾಲಾವಕಾಶವಿದೆ. ಆದ್ದರಿಂದ ವಿದ್ಯಾರ್ಥಿಗಳು, ಪಾಲಕರು, ಪೋಷಕರು ಹಾಗೂ ತಾವಿರುವ ಪ್ರದೇಶದ ನಿವಾಸಿಗಳಲ್ಲಿ ಮತಪಟ್ಟಿ ಪರಿಷ್ಕರಣೆ ಕುರಿತಂತೆ ಜಾಗೃತಿ ಮೂಡಿಸಬೇಕು ಎಂದರು.

    ಪ್ರಜಾಪ್ರಭುತ್ವದ ಯಶಸ್ವಿಯಾಗಬೇಕಾದರೆ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಅಧಿಕವಾಗಬೇಕು. 1-1-2020ಕ್ಕೆ ಅರ್ಹತಾ ದಿನವನ್ನಾಗಿ ಪರಿಗಣಿಸಿ 18 ವರ್ಷ ವಯಸ್ಸು ತುಂಬಿದ ಯುವಜನರ ಹೆಸರನ್ನು ಮತಪಟ್ಟಿಗೆ ಸೇರಿಸಲಾಗುತ್ತಿದೆ. ಜ.6ರಿಂದ ಮೂರು ದಿನಗಳ ಜಿಲ್ಲಾದ್ಯಂತ ಮಿಂಚಿನ ನೋಂದಣಿ ಕಾರ್ಯ ನಡೆಯಲಿದೆ. ಯುವಕ, ಯುವಕರು ಹೆಸರು ನೋಂದಾಯಿಸುವ ಮೂಲಕ ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯಬೇಕೆಂದು ತಿಳಿಸಿದರು.

    ಸ್ವೀಪ್ ಸಮಿತಿ ಅಧ್ಯಕ್ಷೆ, ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಪ್ರಕ್ರಿಯೆ, ಕಾನೂನು ಹಾಗೂ ಸಂವಿಧಾನ ಒದಗಿಸಿರುವ ಮೂಲಹಕ್ಕುಗಳು, ನಿರ್ದೇಶನ ತತ್ವಗಳೆಡೆ ತಿಳಿವಳಿಕೆ ಹೊಂದಿರಬೇಕು. ಜನಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಕುರಿತಂತೆ ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಚುನಾವಣೆ ಸಾಕ್ಷರಥ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೌಢಶಾಲೆ, ಪಿಯು ಹಾಗೂ ಪದವಿ ಕಾಲೇಜಿನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಬಂಧ, ರಸಪ್ರಶ್ನೆ ಹಾಗೂ ವೋಟ್ ಹಾಕೋಣ ಬನ್ನಿ ಹೆಸರಿನ ನಾಟಕ ಪ್ರದರ್ಶನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

    ಪಿಯು ಪ್ರಭಾರ ಉಪ ನಿರ್ದೇಶಕ ಕೆ.ವೀರಭದ್ರಪ್ಪ, ಜಿಪಂ ಡಿಎಸ್ ರಂಗಸ್ವಾಮಿ, ಡಿಡಿಪಿಐ ಕೆ.ರವಿಶಂಕರ ರೆಡ್ಡಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್, ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಗುಡ್ಡದೇಶ್ವರಪ್ಪ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಎಸ್.ನಾಗಭೂಷಣ್, ಕುಬೇಂದ್ರಪ್ಪ, ಬಿ.ಎಂ.ತಿಪ್ಪೇಸ್ವಾಮಿ, ಸ್ವೀಪ್ ಸಮಿತಿ ಕಾರ್ಯದರ್ಶಿ ಸುಮಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts