More

    ಚಿತ್ರದುರ್ಗ ಜಿಲ್ಲೆಯಲ್ಲಿ ಶುರುವಾಗದ ಮಳೆ

    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
    ಜಿಲ್ಲೆಯ ಮೊಳಕಾಲ್ಮೂರು ಹೊರತುಪಡಿಸಿ ಇನ್ನುಳಿದ ತಾಲೂಕುಗಳಲ್ಲಿ ಹೇಳಿಕೊಳ್ಳುವಂತಹ ಮುಂಗಾರು ಪೂರ್ವ ಮಳೆಯಾಗಿಲ್ಲ.

    ಮಳೆ ಇಲ್ಲದೇ ಆರಂಭದಲ್ಲೇ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಚುನಾವಣೆ ನಂತರ ಗರಿಗೆದರಬೇಕಿತ್ತಾದರೂ ಅನ್ನದಾತರು ಆಸಕ್ತಿ ತೋರಿಲ್ಲ. ಇದಕ್ಕೆ ವರುಣನ ಅವಕೃಪೆಯೇ ಕಾರಣ.

    ಕೃಷಿಗಾಗಿ ಭೂಮಿ ಹದ ಮಾಡಿಕೊಂಡು ಸಿದ್ಧತೆಯಲ್ಲಿ ತೊಡಗಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಅಲ್ಪ-ಸ್ವಲ್ಪ ಮಳೆಯಾದ ಪ್ರದೇಶಗಳಲ್ಲಿ ಮಾತ್ರ ಮಾಗಿ ಉಳುಮೆ ಆಗಿದೆ. ವರುಣನ ಆಶೀರ್ವಾದವಾದಲ್ಲಿ ಕೃಷಿಯತ್ತ ರೈತ ಸಮೂಹದ ಚಿತ್ತ ಹರಿಯಲಿದೆ.

    ಅಗತ್ಯ ಯೋಜನೆ

    ಜಿಲ್ಲೆಯ ಬಹಳಷ್ಟು ಕಡೆ ಮಳೆಯಾಗದ ಕಾರಣ ಭೂಮಿ ಹಸಿಯಾಗಿಲ್ಲ. ಹೀಗಾಗಿ ಮೇ 18ರವರೆಗೂ 3,279 ಹೆಕ್ಟೇರ್ ಬಿತ್ತನೆಯಾಗಿದ್ದು, ಈವರೆಗೂ ಶೇ.1ರಷ್ಟು ಗುರಿ ಸಾಧನೆಯಾಗಿದೆ.

    ಮುಂಗಾರು ಹಂಗಾಮಿನಲ್ಲಿ 2.98ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು ಅದಕ್ಕಾಗಿ ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಯೋಜನೆ ಸಿದ್ಧಪಡಿಸಿಕೊಂಡು ಬೇಕಾದ ತಯಾರಿಗೆ ಮುಂದಾಗಿದ್ದಾರೆ.

    ವಾಡಿಕೆಯಂತೆ ಏಪ್ರಿಲ್‌ನಿಂದ ಮೇ 18ರವರೆಗೂ 69.8 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 49.2 ಮಿ.ಮೀ. ಮಳೆಯಾಗಿದೆ. ಹೀಗಾಗಿ ಜಿಲ್ಲೆಯ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆಯಲ್ಲಿ ಸಾಧನೆ ಶೂನ್ಯವಾಗಿದೆ.

    ಮೊಳಕಾಲ್ಮೂರು ತಾಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಶೇ. 21ರಷ್ಟು ಹೆಚ್ಚು ಮಳೆಯಾಗಿದೆ. ಚಿತ್ರದುರ್ಗದಲ್ಲಿ ಶೇ.71ಕ್ಕಿಂತ ಕಡಿಮೆಯಾಗಿದೆ.

    ಬಿತ್ತನೆ ಗುರಿ
    ಪ್ರಸ್ತುತ ಹಂಗಾಮಿನಲ್ಲಿ 2,98,150 ಹೆಕ್ಟೇರ್ ಬಿತ್ತನೆ ಗುರಿ ಇದೆ. ರಾಗಿ 45,150 ಹೆ., ಸಿರಿಧಾನ್ಯ 11,300ಹೆ., ಮೆಕ್ಕೆಜೋಳ 74000 ಹೆ., ಎಣ್ಣೆಕಾಳು 1,12,400 ಹೆ., ತೊಗರಿಬೇಳೆ 16,100 ಹೆ., ಹೆಸರುಬೇಳೆ 4,585 ಹೆ., ಸೂರ್ಯಕಾಂತಿ 10,340 ಹೆ. ಹಾಗೂ 12,780 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯ ಗುರಿ ಇದೆ.

    ಹಿಂದಿನ ವರ್ಷ ಇಷ್ಟೊತ್ತಿಗೆ ನಾಲ್ಕೈದು ಹದ ಮಳೆಯಾಗಿತ್ತು. ಈ ಬಾರಿ ಮುಂಗಾರು ಪೂರ್ವ ಮಳೆ ಅತ್ಯಂತ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ವಾಡಿಕೆ ಮಳೆ ಪ್ರಮಾಣ ಹೆಚ್ಚಳವಾದಲ್ಲಿ ಬಿತ್ತನೆ ನಿರೀಕ್ಷಿತ ಗುರಿ ತಲುಪುವ ವಿಶ್ವಾಸವಿದೆ.
    – ರಮೇಶ್‌ಕುಮಾರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಚಿತ್ರದುರ್ಗ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts