ಚಿತ್ರದುರ್ಗ: ಪುಷ್ಯ ಮಾಸದಲ್ಲಿ ಗಂಡ-ಹೆಂಡತಿ ಪರಸ್ಪರ ಮುಖ ನೋಡಬಾರದೆಂಬ ಇಂತಹ ಅನೇಕ ಮೂಢ ನಂಬಿಕೆ ಹೋಗಲಾಡಿಸಲು ಸಾಮೂಹಿಕ ವಿವಾಹ ಮಹೋತ್ಸವ ಸಹಕಾರಿ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಅ.ಜೊಲ್ಲೆ ಹೇಳಿದರು.
ಮುರುಘಾ ಮಠದಲ್ಲಿ ಭಾನುವಾರ 30ನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿ, ಪುಷ್ಯ ಮಾಸದಲ್ಲಿ ದಂಪತಿ ಒಟ್ಟಿಗೆ ಇರಬಾರದೆಂಬ ನಂಬಿಕೆ ಹಾಸು ಹೊಕ್ಕಾಗಿದ್ದರೂ ಕಲ್ಯಾಣ ಮಹೋತ್ಸವ ನಡೆಯುತ್ತಿರುವ ಶರಣರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮದುವೆ ಎಂದರೆ ಖುಷಿ. ಆದರೆ, ಸಂಸಾರ ನಿರ್ವಹಣೆ ಕಷ್ಟ. ಸ್ವರ್ಗ ಮತ್ತು ನರಕಗಳು ಬೇರೆಲ್ಲೂ ಇಲ್ಲ. ಪತಿ-ಪತ್ನಿ ನಡುವೆ ಸಾಮ ರಸ್ಯವಿದ್ದರೆ ಮನೆಯೇ ಸ್ವರ್ಗ. ಹೊಂದಾಣಿಕೆಯಲ್ಲಿ ಸಮಸ್ಯೆ ಕಾಣಿಸಿದರೆ ಅದೇ ನರಕ. ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ 12ನೇ ಶತಮಾನದಲ್ಲೇ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ್ದಾರೆ. ಅಂದಿನ ಶರಣರ ಕಾರ್ಯವನ್ನು ಮುರುಘಾ ಶರಣರು ಮುಂದುವರಿಸುತ್ತಿದ್ದಾರೆ ಎಂದರು.
ಮಠದ ಅನಾಥ ಆಶ್ರಮಕ್ಕೆ ಅನುದಾನ ಮಂಜೂರು ಭರವಸೆ ನೀಡಿದ ಸಚಿವರು, ಈ ಆಶ್ರಮಕ್ಕೆ ಸ್ಥಗಿತಗೊಂಡಿರುವ ಪಡಿತರ ಸವಲತ್ತನ್ನು ಶೀಘ್ರ ಪುನಾರಂಭಿಸುವುದಾಗಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ದೇವರು ಎಲ್ಲ ಕಡೆ ಇದ್ದಾನೊ ಇಲ್ಲವೋ ಗೊತ್ತಿಲ್ಲ. ಆದರೆ, ಹಸಿವು, ಬಡತನ ವಿಶ್ವವ್ಯಾಪಿಯಾಗಿದೆ. ಎಲ್ಲ ದೇಶಗಳಲ್ಲೂ ಬಡತನವಿದೆ. ಬಡತನ ನಿವಾರಣೆಗೆ ಶ್ರಮ ಸಂಸ್ಕೃತಿ ಬೆಳೆಯಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಟ್ಟರೆ ಮತ್ತೊಬ್ಬರ ಮೇಲಿನ ಅವಲಂಬನೆ ತಪ್ಪುತ್ತದೆ ಎಂದರು.
ಅಕ್ಕಿ ಆಲೂರಿನ ಚೆನ್ನವೀರೇಶ್ವರ ವಿರಕ್ತಮಠದ ಶ್ರೀ ಸಮ್ಮುಖ ವಹಿಸಿದ್ದರು. ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಶಂಕರ ಜೊಲ್ಲೆ ಮತ್ತಿತರರು ಇದ್ದರು.
ಗಂಗಾವತಿ ಉದ್ಯಮಿ ಸುರೇಶ ಸಿಂಗನಾಳರನ್ನು ಗೌರವಿಸಲಾಯಿತು. ಒಂದು ಅಂತರ್ಜಾತಿ ಸೇರಿ 9 ಜೋಡಿ ನವ ಜೀವನಕ್ಕೆ ಕಾಲಿಟ್ಟಿತು.
ವರದಕ್ಷಿಣೆ ಪಡೆಯೋದು ಪಾಪದ ಕೆಲಸ: ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಸಾಮೂಹಿಕ, ಸರಳ ವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು. ವರದಕ್ಷಿಣೆ ಪಡೆದು ಮದುವೆ ಆಗುವುದು ಕಾನೂನು ಪ್ರಕಾರ ತಪ್ಪು, ಸಾಮಾಜಿಕವಾಗಿ ಪಾಪದ ಕೆಲಸ ಎಂದು ಅಕ್ಕಿ ಆಲೂರಿನ ಚೆನ್ನವೀರೇಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ತಿಳಿಸಿದರು.
ಮದುವೆಗೆ ಸಾಲ ಕುಟುಂಬ ಸಂಕಷ್ಟಕ್ಕೆ: ಭಾರತೀಯರು ಮಕ್ಕಳ ಶಿಕ್ಷಣ, ಮದುವೆ, ಆಸ್ತಿ, ಆರೋಗ್ಯಕ್ಕೆ ಹೆಚ್ಚು ಖರ್ಚು ಮಾಡುತ್ತಾರೆ. ಮದುವೆಗೆ ಸಾಲ ಮಾಡಿದ ಅನೇಕ ಕುಟುಂಬಗಳು ಆಸ್ತಿ ಕಳೆದುಕೊಂಡಿವೆ. ಮೌಢ್ಯ ಹೋಗಲಾಡಿಸಿ ಉಳಿತಾಯ, ಮನೋಭಾವ ರೂಢಿಸಲು ಸರಳ ವಿವಾಹ ಪ್ರೋತ್ಸಾಹಿಸುತ್ತಿರುವ ಶರಣರ ಕಾರ್ಯ ಶ್ಲಾಘನೀಯ ಎಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕ ಸಿ.ಎಸ್.ಕರಿಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.