ಚಿತ್ರದುರ್ಗದಲ್ಲಿ ಸಿದ್ಧಗಂಗಾ ಶ್ರೀ, ಯೋಧರಿಗೆ ನಮನ

ಚಿತ್ರದುರ್ಗ: ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಗೌರವ ಹೆಚ್ಚಲಿದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ವಂದೇ ಮಾತರಂ ಜಾಗೃತಿ ವೇದಿಕೆಯಿಂದ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ, ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಒತ್ತಾಯ ಹಾಗೂ ಅಥಣಿಯ ಬಸವರಾಜ್ ಉಂಬ್ರಾಣಿಯಿಂದ ಗಣಿತ ಜುಗಲ್‌ಬಂದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರ್ಲಕ್ಷಿತ ಸಮುದಾಯ, ಶೋಷಿತರು, ಬಡಮಕ್ಕಳಿಗೆ ಮಠ ಯಾವ ರೀತಿ ಪ್ರಯೋಜನ ಆಗಲಿದೆ ಎನ್ನುವುದನ್ನು ಶ್ರೀಗಳು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಯೋಧ, ರೈತ ದೇಶದ ಎರಡು ಕಣ್ಣುಗಳಿದ್ದಂತೆ. ಇವರಿಬ್ಬರಿಗೂ ಮಾರ್ಗದರ್ಶನ ಮಾಡುವ ಗುರುಗಳನ್ನು ಗೌರವಿಸುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ನಟರನ್ನು ಹೀರೋಗಳನ್ನಾಗಿ ಸ್ವೀಕರಿಸುವ ಯುವ ಪೀಳಿಗೆ ಅದರಿಂದ ಸಮಯ, ಹಣ ವ್ಯರ್ಥ ಮಾಡಿಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಅಂಧ ಪ್ರತಿಭೆ ಅಥಣಿಯ ಬಸವರಾಜ್ ಉಂಬ್ರಾಣಿ, ನಿವೃತ್ತ ಶಿಕ್ಷಕ ಎಂ.ಎಸ್.ಪೂಜಾರ್ ವಿವಿಧ ಶಾಲಾ ವಿದ್ಯಾರ್ಥಿಗಳೊಂದಿಗೆ ಗಣಿತ ಜುಗಲ್‌ಬಂದಿ ನಡೆಸಿದರು. 101 ಪ್ರಶ್ನೆಗಳನ್ನು ಕೇಳಿ ಉತ್ತರಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.