Chitradurga Siddaganga Sri blood donation

ಸಿದ್ಧಗಂಗಾ ಶ್ರೀ ಚೇತರಿಕೆಗೆ ಪ್ರಾರ್ಥಿಸಿ ಚಿತ್ರದುರ್ಗದಲ್ಲಿ ರಕ್ತದಾನ

ಚಿತ್ರದುರ್ಗ: ನಡೆದಾಡುವ ದೇವರು ತುಮಕೂರು ಸಿದ್ಧಗಂಗಾ ಮಠದ ಡಾ. ಶ್ರೀ. ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಟಿವಿಎಸ್​ ಅಂಡ್​ ಸನ್ಸ್​ ಸಂಸ್ಥೆಯ ನೌಕರರು ರಕ್ತದಾನ ಮಾಡಿದರು.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಭಾನುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಅಧಿಕ ಸಿಬ್ಬಂದಿ ರಕ್ತದಾನ ಮಾಡಿ ಮಾದರಿಯಾದರು.

ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್​ ಮಾಧ್ಯಮ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿವಿಎಸ್​ ಅಂಡ್​ ಸನ್ಸ್​, ಅಶೋಕ ಲೇಲ್ಯಾಂಡ್​ ಸಂಸ್ಥೆಯ ಸಿಬ್ಬಂದಿ ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ರಕ್ತದಾನ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಇದೇ ವೇಳೆ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ​ ಅಬಿದುಲ್ಲಾ, ಚಿತ್ರದುರ್ಗ ತುಂಬಾ ಹಿಂದುಳಿದ ಜಿಲ್ಲೆಯಾಗಿದ್ದು ಈ ಭಾಗದ ಬಡ ರೋಗಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ರಕ್ತದಾನ ಮಾಡಿದ್ದೇವೆ. ಸಿದ್ಧಗಂಗಾ ಮಠದ ಡಾ. ಶ್ರೀ. ಶಿವಕುಮಾರ ಸ್ವಾಮೀಜಿ ಈ ನಾಡಿಗೆ ಸಲ್ಲಿಸಿರುವ ಸೇವೆ ಅಪಾರವಾಗಿದೆ. ಅವರು ಇನ್ನೂ ನಾಲ್ಕು ಕಾಲ ನಮ್ಮ ನಡುವೆ ಇರಬೇಕು. ಈ ನಿಟ್ಟಿನಲ್ಲಿ ವರ್ಕ್​ ಶಾಪ್​ನಲ್ಲಿ ಕೆಲಸ ಮಾಡುವ ಕಾರ್ಮಿಕರೆಲ್ಲರೂ ಒಂದೇ ಸಂಕಲ್ಪದಿಂದ ರಕ್ತದಾನ ಮಾಡಿದ್ದೇವೆ ಎಂದರು.