ಅಕ್ಷರ, ನಾಗರಿಕತೆ ಜತೆಗೂಡಬೇಕು

ಚಿತ್ರದುರ್ಗ: ಅಕ್ಷರ ಸಂಸ್ಕೃತಿಯಿಂದ ಯಾವ ಸಮುದಾಯವು ವಂಚಿತವಾಗಬಾರದು ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಅಮೋಘ ಹೋಟೆಲ್‌ನಲ್ಲಿ ಕುಂಚಿಗ ವೀರಶೈವ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಿಕ್ಷಣಕ್ಕೆ ಎಷ್ಟೇ ಒತ್ತು ನೀಡಿ ಸೌಲಭ್ಯ ನೀಡಿದರೂ ಪೂರ್ಣ ಪ್ರಮಾಣದ ಸಾಕ್ಷರತೆ ಸಾಧಿಸಲು ಆಗಿಲ್ಲ ಎಂದು ಬೇಸರಿಸಿದರು.

ಕೆಲವು ಸಮಾಜಗಳಲ್ಲಿ ಅಕ್ಷರದ ಜ್ಯೋತಿ ಬೆಳಗಿದೆ. ಆದರೆ, ನಾಗರಿಕತೆಯಲ್ಲಿ ಅಂಧಕಾರದಲ್ಲಿದ್ದಾರೆ. ಎರಡು ಜತೆ ಜತೆಯಾಗಿ ಸಾಗಿದಾಗ ಮಾತ್ರ ಬದುಕು ಪ್ರಕಾಶಮಾನವಾಗಿ, ಸ್ವಾಭಿಮಾನದ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಮಕ್ಕಳಿಗೆ ಅನ್ನದಾನ ಮಾಡದೆ ಹೋದರೆ ವಿದ್ಯೆದಾನ ಮಾಡಲು ಆಗುವುದಿಲ್ಲ. ಇವೆರಡು ಪರಸ್ಪರ ಪೂರಕ ಎಂದು ಜಯದೇವ ಜಗದ್ಗುರುಗಳಿಗೆ ತಿಳಿದಿತ್ತು. ಅದೇ ಹಾದಿಯಲ್ಲೇ ಇಂದಿಗೂ ಶ್ರೀಮಠ ನಡೆದುಕೊಂಡು ಬರುತ್ತಿದೆ ಎಂದರು.

ಕುಂಚಿಗ ವೀರಶೈವ ಸಮಾಜದಲ್ಲಿ ಪ್ರತಿಭೆಗಳಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ ಯಲ್ಲಿ ಪಡೆದಿರುವ ಅಂಕಗಳೇ ಇದನ್ನು ಸಾಕ್ಷೀಕರಿಸುತ್ತದೆ. ನಿರಂತರ ಪ್ರಯತ್ನದಿಂದ ಸಾಧನೆ ಮಾಡಬೇಕು ಎಂದು ಹೇಳಿದರು.

ಸಮಾಜದ ಪ್ರಧಾನ ಕಾರ್ಯದರ್ಶಿ ಎಲ್.ಬಿ.ರಾಜಶೇಖರ್ ಮಾತನಾಡಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕಾದರೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ, ಮುಖಂಡರಾದ ಪರಮೇಶ್ವರಪ್ಪ, ನಿವೃತ್ತ ಉಪನ್ಯಾಸಕ ಕುಬೇರಪ್ಪ, ವಿಶ್ವನಾಥ್, ಶಿವಪ್ರಕಾಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *