ಚಿತ್ರದುರ್ಗದಲ್ಲಿ ಐಇಸಿ-ಔಟ್‌ರೀಚ್ ತರಬೇತಿ ಕಾರ್ಯಕ್ರಮ

ಚಿತ್ರದುರ್ಗ: ಕೌಶಲ ಬೆಳಸಿಕೊಂಡರೆ ಲಭ್ಯವಿರುವ ಅವಕಾಶದಲ್ಲೇ ಸ್ವಯಂ ಉದ್ಯೋಗ ಆರಂಭಿಸಬಹುದು ಎಂದು ದಿಶಾ ಉದ್ಯಮಶೀಲತಾ ಕೇಂದ್ರದ ವ್ಯವಸ್ಥಾಪಕಿ ಚಾಂದಿನಿ ತಿಳಿಸಿದರು.
ನಗರದ ಎಸ್‌ಜೆಎಂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ದಿಶಾ-ಐಇಸಿ- ಔಟ್‌ರೀಚ್’ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವೃತ್ತಿ ಕೌಶಲದಲ್ಲಿ ದೇಶಕ್ಕೆ ಶತಮಾನದ ಇತಿಹಾಸವಿದೆ. ಪ್ರತಿಭಾವಂತ ಉದ್ಯಮಶೀಲರು ಬೇರೆ ದೇಶಗಳಲ್ಲಿ ಬೃಹತ್ ಉದ್ಯಮ ಸ್ಥಾಪಿಸಿ ಪ್ರಭುತ್ವ ಸಾಧಿಸಿದ್ದಾರೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಜ್ಞಾನ ಪಡೆಯಲು ಅವಕಾಶಗಳು ವಿಫುಲವಾಗಿವೆ. ಆದರೆ, ಪದವಿವರೆಗೂ ಪಠ್ಯಕ್ಕೆ ಸಿಮೀತರಾಗಿ ಬಳಿಕ ಉದ್ಯೋಗಕ್ಕೆ ಪರದಾಡುತ್ತೇವೆ. ಕಣ್ಣ ಮುಂದಿನ ಅವಕಾಶಗಳನ್ನು ಗುರುತಿಸುವಲ್ಲಿ ವಿಫಲವಾಗುತ್ತಿದ್ದೇವೆ ಎಂದು ತಿಳಿಸಿದರು.
ಪದವಿ ಓದುವಾಗಲೇ ಕೌಶಲ ತರಬೇತಿ ಪಡೆದರೆ ಸ್ವಯಂ ಉದ್ಯೋಗಕ್ಕೆ ಸಹಕಾರಿಯಾಗಲಿದೆ. ಸಂವಹನ ಕೌಶಲವಿಲ್ಲದೆ ಸವಾಲು ಎದುರಿಸುವಲ್ಲಿ ಸೋಲುತ್ತಿದ್ದೇವೆ. ಆಸಕ್ತಿ ಇರುವ ಕ್ಷೇತ್ರದಲ್ಲಿ ಕೌಶಲ ಬೆಳೆಸಿಕೊಂಡರೆ ದುಡಿಮೆ ಕಷ್ಟವಾಗುವುದಿಲ್ಲ ಎಂದರು.
ಪೂರಕ ವಾತಾವರಣ ನಿರ್ಮಿಸಿಕೊಂಡು ಸಣ್ಣ ಪ್ರಮಾಣದ ಉದ್ದಿಮೆ ಪ್ರಾರಂಭಿಸಿ ಬೃಹತ್ ಮಟ್ಟದಲ್ಲಿ ಬೆಳೆಯಲು ತರಬೇತಿ ಅವಶ್ಯಕ ಎಂದು ಹೇಳಿದರು.
ಪದವಿ ನಂತರ ಏನು ಮಾಡಬೇಕೆಂಬ ಯೋಜನೆ ಈಗಿನಿಂದಲೇ ರೂಪಿಸಿಕೊಳ್ಳಬೇಕು. ಮುಂದೆ ಸ್ವಯಂ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ರಮೇಶ್ ಮಾತನಾಡಿ, ವಿದೇಶದಲ್ಲಿ ವಿದ್ಯಾರ್ಥಿಗಳು ಓದುವ ಜತೆಗೆ ಆವಿಷ್ಕಾರ ನಡೆಸುತ್ತಾರೆ. ಆದರೆ, ನಮ್ಮಲ್ಲಿ ಅಂತಹ ಬೆಳವಣಿಗೆ ಕಂಡು ಬರುತ್ತಿಲ್ಲ. ಕೇವಲ ಅಂಕಗಳಿಗೆ ಮಾತ್ರ ಸಿಮೀತರಾಗಿದ್ದೇವೆ. ಕಲಿಕೆ ಜತೆಗೆ ಕೌಶಲಕ್ಕೂ ಹೆಚ್ಚಿನ ಮಹತ್ವ ನೀಡಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ತಿಳಿಸಿದರು.
ವಾಣಿಜ್ಯಶಾಸ್ತ್ರ ಉಪನ್ಯಾಸಕ ಮೋಹನ್ ಕುಮಾರ್, ದಿಶಾ ಕೇಂದ್ರದ ಸಮಲೋಚಕಿ ಸ್ವಾತಿ ಇದ್ದರು.