ಚಿತ್ರದುರ್ಗ: ಶ್ರೀಗಂಧದ ವಾಸನೆ ಗೊತ್ತಿಲ್ಲದವರಿಗೆ ಗಂಧದ ಬಗ್ಗೆ ಏನು ಗೊತ್ತಾಗುತ್ತದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿಕೆಗೆ ಸಚಿವ ವೆಂಕಟರಮಣಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅಜ್ಜಂಪುರ ಬಳಿ ಬುಧವಾರ ಭದ್ರಾ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ದಿನಗಳ ಹಿಂದೆ ಕಾಮಗಾರಿ ವೀಕ್ಷಣೆ ನಡೆಸಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೇ ಬಾಯಿಗೆ ಬಂದಂತೆ ಮಾತನಾಡಿದ್ದು, ಈ ರೀತಿ ವರ್ತಿಸುವುದನ್ನು ಮೊದಲು ನಿಲ್ಲಿಸಲಿ ಎಂದು ತಿಳಿಸಿದರು.
ಕ್ಷೇತ್ರಕ್ಕೆ ಸಂಸದರಾಗಿ ಇನ್ನೂ ಎರಡು ತಿಂಗಳು ಆಗಿಲ್ಲ. ಸುಮ್ಮನೇ ಬಂದು ಅದು ಹಾಗೇ ಆಗಬೇಕು. ಹೀಗೆ ನಡೆಯಬೇಕು, ಜಲ ಸಂಪನ್ಮೂಲ ಸಚಿವರ ಜತೆ ಮಾತನಾಡುತ್ತೇನೆ ಎನ್ನುವುದಲ್ಲ. ಮೊದಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನಾಗಿತ್ತು ಎಂದು ತಿಳಿದುಕೊಳ್ಳಲಿ. ಜತೆಗೆ ಆನೇಕಲ್ ಕ್ಷೇತ್ರಕ್ಕೆ ಏನೇನು ಕೊಡುಗೆ ನೀಡಿದ್ದಾರೆಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಯೋಜನೆ ಘೋಷಣೆ ಮಾಡಲು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಸಂಸದರು ಮನಬಂದಂತೆ ಮಾತನಾಡುವುದನ್ನು ಬಿಟ್ಟು ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರಾಷ್ಟ್ರೀಯ ಯೋಜನೆ ಘೋಷಣೆ ಮಾಡಿಸಿ ಅನುದಾನ ತರಲಿ ಎಂದು ತಿಳಿಸಿದರು.