ಮದ್ಯ ಸೇವಿಸಿ ವಾಹನ ಓಡಿಸಿದರೆ ದಂಡ

ಚಿತ್ರದುರ್ಗ: ಹೆಚ್ಚುತ್ತಿರುವ ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಕೊನೆಗೂ ಪೊಲೀಸ್ ಇಲಾಖೆ ಮುಂದಾಗಿದ್ದು, ಜಿಲ್ಲಾದ್ಯಂತ ವಿಶೇಷ ಆಂದೋಲನಕ್ಕೆ ಯೋಜನೆ ರೂಪಿಸಿದೆ.

ಕುಡಿದು ವಾಹನ ಓಡಿಸುವಂಥವರ ವಿರುದ್ಧ ಪ್ರತಿ ಶನಿವಾರ ಸಂಜೆ 7.30ರಿಂದ ರಾತ್ರಿ 12ರ ವರೆಗೆ ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ತಪಾಸಣೆ ನಡೆಸಲಿದ್ದಾರೆ. ಶನಿವಾರವಷ್ಟೇ ತಪಾಸಣೆ ಎಂದು ನಿರ್ಲಕ್ಷಿಸುವಂತಿಲ್ಲ.

ವಾರದಲ್ಲಿ 3 ದಿನ ಅಂದರೆ ಸೋಮವಾರ, ಗುರುವಾರ, ಶನಿವಾರ ಎಎಸ್‌ಐನಿಂದ ಎಎಸ್‌ಪಿ ವರೆಗಿನ ಎಲ್ಲ ಅಧಿಕಾರಿಗಳು ಬೆಳಗ್ಗೆ, ಸಂಜೆ ಬೀದಿಗಿಳಿದು ಸಂಚಾರಿ ನಿಯಮ ಪಾಲಿಸದ ವಾಹನ ಸವಾರರು, ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಲಿದ್ದಾರೆ. ಈ ಮೂರೇ ದಿನವೆಂದು ಉದಾಸೀನ ಮಾಡುವಂತಿಲ್ಲ, ವಾರದ ಏಳು ದಿನವೂ ಹಠಾತ್ತನೆ ಎಲ್ಲೆಂದರಲ್ಲೇ ಪೊಲೀಸರು ತಪಾಸಣೆ ನಡೆಸಲಿದ್ದಾರೆ.

ನೆನಪಾದ ಸಂಚಾರ ವ್ಯವಸ್ಥೆ: ಸಿಬ್ಬಂದಿ ಕೊರತೆ, ಬಂದೋಬಸ್ತ್, ಕಾನೂನು ಸುವ್ಯವಸ್ಥೆಯಂಥ ಕೆಲಸಗಳ ಒತ್ತಡ ಇತ್ಯಾದಿ ಸಬೂಬುಗಳಲ್ಲಿ ಸಂಚಾರಿ ಸುವ್ಯವಸ್ಥೆಯನ್ನೇ ಮರೆತಂತಿದ್ದ ಪೊಲೀಸರು, ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತ, ಸರಗಳ್ಳತನ ಮೊದಲಾದ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.

59 ಜನರ ಪ್ರಾಣ ಹಾನಿ: ಜಿಲ್ಲಾದ್ಯಂತ ಕಳೆದ ಮಾರ್ಚ್‌ನಲ್ಲಿ 30 ಹಾಗೂ ಏಪ್ರಿಲ್‌ನಲ್ಲಿ 29 ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಈ ಅವಧಿಯ ಅಪಘಾತಗಳ ಕುರಿತಂತೆ ಆರ್‌ಟಿಒ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿರುವ ಪೊಲೀಸರಿಗೆ, ಬಹು ಮುಖ್ಯವಾಗಿ ಕಂಡು ಬಂದಿರುವ ಅಂಶ ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿರುವುದು. ಆದ್ದರಿಂದ ಕುಡಿದು ವಾಹನ ಚಾಲನೆ, ಅತೀ ವೇಗದ ಚಾಲನೆ ನಿಯಂತ್ರಿಸಲೇ ಬೇಕೆಂದು ಜಿಲ್ಲೆಯ ಎಲ್ಲ ಠಾಣಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ.

ಇಂಟ್ರಾಸ್ಪೆಕ್ಟರ್: ಜಿಲ್ಲೆಯ 3 ಪೊಲೀಸ್ ಸಬ್ ಡಿವಿಜನ್‌ಗಳಿಗೆ ತಲಾ ಒಂದರಂತೆ ಮಂಜೂರಾಗಿದ್ದ 3 ಇಂಟ್ರಾಸ್ಪೆಕ್ಟರ್ ವಾಹನಗಳ ಬಳಕೆ ಆಗುತ್ತಿರಲಿಲ್ಲ. ಆದರೆ, ಈಗ ಚಿತ್ರದುರ್ಗ, ಚಳ್ಳಕೆರೆ ಸಬ್ ಡಿವಿಜನ್‌ಗಳಲ್ಲಿ ದುರಸ್ತಿ ಮಾಡಿಸಿ ಬಳಸಲಾಗುತ್ತಿದೆ. ಹಿರಿಯೂರಿನ ವಾಹನ ದುರಸ್ತಿ ಆಗ ಬೇಕಿದೆ. ಒಂದು ಇಂಟ್ರಾಸ್ಪೆಕ್ಟರ್‌ನ್ನು ನಿತ್ಯ ಒಂದೊಂದು ಠಾಣೆ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ವಿರುದ್ಧ ಬಳಸಲಿದ್ದಾರೆ.

ವೆಹಿಕಲ್ ಸೀಜ್: ಸಂಚಾರಿ ನಿಯಮ ಉಲ್ಲಂಘನೆಗೆ ಸ್ಥಳದಲ್ಲೇ ದಂಡ ವಿಧಿಸುವುದು ಒಂದೆಡೆಯಾದರೆ, ಡ್ರಂಕನ್ ಡ್ರೈವ್ (ಡಿಡಿ) ಪ್ರಕರಣಗಳಲ್ಲಿ ವೆಹಿಕಲ್ ಸೀಜ್ ಮಾಡಿ, ಚಾಲಕನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತದೆ. ನ್ಯಾಯಾಲಯ ಹತ್ತಾರು ಸಾವಿರ ರೂ. ವರೆಗೂ ದಂಡ ವಿಧಿಸುವ ಸಾಧ್ಯತೆ ಇದೆ. ಕುಡಿದು ವಾಹನ ಓಡಿಸುವ ತಪ್ಪು ಮರು ಕಳಿಸಿದರೆ ಚಾಲನಾ ಪರವಾನಗಿ ರದ್ದು ಮಾಡುವಂತೆ ಸಾರಿಗೆ ಇಲಾಖೆಗೆ ಪೊಲೀಸರು ಶಿಫಾರಸು ಮಾಡಲಿದ್ದಾರೆ. ಶನಿವಾರ ಒಂದೇ ದಿನ ಚಿತ್ರದುರ್ಗದಲ್ಲಿ 17 ಡಿಡಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *