ವಿದ್ಯಾರ್ಥಿಗಳಿಗೆ ಸಂಶೋಧನೆ ಬಗೆಗಿನ ಆಸಕ್ತಿ ಅಗತ್ಯ

ಚಿತ್ರದುರ್ಗ: ಗ್ರಾಮೀಣ ವಿದ್ಯಾರ್ಥಿಗಳು ಸಂಶೋಧನಾ ವಿಭಾಗದಲ್ಲಿ ಹೆಚ್ಚು ಆಸಕ್ತಿವಹಿಸಿ ಗುಣಮಟ್ಟದ ಸಂಶೋಧನೆ ಮಾಡಬೇಕೆಂದು ಕುವೆಂಪು ವಿವಿಯ ಪ್ರೊ.ಸಿ.ಎಸ್.ಬಾಗೇವಾಡಿ ತಿಳಿಸಿದರು.

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಗಣಿತದಲ್ಲಿ ಇತ್ತೀಚಿನ ಒಲವುಗಳು ಮತ್ತು ಅದರ ಅನ್ವಯ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಚಿತ್ರದುರ್ಗ ಬರಪೀಡಿತ ಪ್ರದೇಶವಾಗಿದ್ದರು ಸಹ ಸಾಧಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಕುವೆಂಪು ವಿವಿಯಲ್ಲಿ ಪಿಎಚ್‌.ಡಿ ಪಡೆದ ವಿದ್ಯಾರ್ಥಿಗಳೇ ಸಾಕ್ಷಿ ಎಂದರು.

90ರ ದಶಕದಲ್ಲಿ ಸಂಶೋಧನೆ ಮಾರ್ಗ ಕಠಿಣವಾಗಿತ್ತು. ಆದರೆ, ತಂತ್ರಜ್ಞಾನ ಯುಗದಲ್ಲಿ ಅಂಗೈಯಲ್ಲಿ ಪ್ರಪಂಚ ಕುಳಿತಿದೆ. ಜತೆಗೆ ಸರ್ಕಾರ ಸಹ ಸಾಕಷ್ಟು ಉತ್ತೇಜನ ನೀಡುತ್ತಿದೆ. ಇವುಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆಗೆ ಇಂತಹ ವಿಚಾರ ಸಂಕಿರಣಗಳು ಸಹಕಾರಿಯಾಗಿವೆ. ಇದರ ಪ್ರಯೋಜನಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.

ಕುವೆಂಪು ವಿವಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಜೆ.ಗಿರೀಶ್, ಪ್ರೊ.ಎಚ್.ಜಿ.ನಾಗರಾಜ್, ಡಾ.ಪಿ.ಟಿ.ಮಂಜುನಾಥ, ಪ್ರೊ.ಎ.ಎಂ.ಜಗದೀಶ್ವರಿ, ಐಕ್ಯೂಎಸಿ ಸಂಚಾಲಕ ಡಾ.ಕೆ.ಕೆ.ಕಮಾನಿ ಉಪಸ್ಥಿತರಿದ್ದರು.