ಜಿಲ್ಲಾಸ್ಪತ್ರೆಗೆ ಜಲಕ್ಷಾಮದ ಬಿಸಿ

ಚಿತ್ರದುರ್ಗ: ವರುಣ ಕಣ್ಣಾಮುಚ್ಚಾಲೆ ಆಡುತ್ತಿದ್ದರೆ, ಇತ್ತ ಜನ ಜೀವ ಕೈಯಲ್ಲಿಡಿದು ದಿನ ದೂಡುವಂತಾಗಿದೆ. ನಿತ್ಯ ನೂರಾರು ಜನ ಬರುವ ಜಿಲ್ಲಾಸ್ಪತ್ರೆಗೂ ಜಲಕ್ಷಾಮ ತಟ್ಟಿದೆ.

ಹಿಂದುಳಿದ ಜಿಲ್ಲೆಯ ಬಹುತೇಕ ಜನರು ಸಕಲ ರೋಗಕ್ಕೂ ಜಿಲ್ಲಾಸ್ಪತ್ರೆ ಅವಲಂಬಿಸಿದ್ದಾರೆ. ಡಯಾಲಿಸಿಸ್‌ಗೆ ಆಗಮಿಸುವ ರೋಗಿಗಳು ಪಾಡು ಹೇಳ ತೀರದಾಗಿದೆ.

ನಿಗದಿಯಂತೆ ಡಯಾಲಿಸಿಸ್ ಚಿಕಿತ್ಸೆಗೆ ನಿತ್ಯ 25ರಿಂದ 30 ರೋಗಿಗಳು ಬರುತ್ತಾರೆ. ಆದರೆ, ಕೆಲ ದಿನಗಳಿಂದ ಚಿಕಿತ್ಸೆ ಸಮರ್ಪಕವಾಗಿ ದೊರೆಯುತ್ತಿಲ್ಲ. ನೀರಿನ ಸಮಸ್ಯೆ ಇದೆ, ಅನುಸರಿಸಿಕೊಂಡು ಹೋಗಿ ಎಂದು ಆಸ್ಪತ್ರೆ ಸಿಬ್ಬಂದಿ ಉತ್ತರ ನೀಡುತ್ತಿದ್ದಾರೆ. ದೂರದೂರಿನಿಂದ ಬರುವ ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಆವರಣದಲ್ಲಿ ನರಳುವುದು ಸಾಮಾನ್ಯವಾಗಿದೆ.

ಖಾಸಗಿಯಲ್ಲಿ ಚಿಕಿತ್ಸೆ ಪಡೆದರೆ ಹಣ ಹೆಚ್ಚಾಗುತ್ತದೆಂದು ಡಯಾಲಿಸಿಸ್ ರೋಗಿಗಳೇ ಕೆಲ ದಿನಗಳಿಂದ ಘಟಕಕ್ಕೆ ಸ್ವಂತ ಹಣದಲ್ಲಿ ಟ್ಯಾಂಕರ್ ನೀರು ಹಾಕಿಸಿದ್ದಾರೆ. ಆದರೆ, ಕೇಂದ್ರಕ್ಕೆ ನಿತ್ಯ 15 ಸಾವಿರ ಲೀಟರ್ ನೀರು ಬೇಕಾಗಿರುವುದರಿಂದ ಟ್ಯಾಂಕರ್ ನೀರು ಯಾವುದಕ್ಕೂ ಸಾಲುತ್ತಿಲ್ಲ.

ಟ್ಯಾಂಕರ್ ನೀರು ಆಧಾರ: ಆಸ್ಪತ್ರೆಗೆ ನಿತ್ಯ 2 ಲಕ್ಷ ಲೀಟರ್ ನೀರು ಬೇಕು. 5 ಬೋರ್‌ವೆಲ್‌ಗಳು ಬತ್ತಿರುವ ಕಾರಣ ಶಾಂತಿ ಸಾಗರದ ನೀರಿನ ಜತೆ 45ರಿಂದ 50 ಸಾವಿರ ಲೀ. ನೀರನ್ನು ಟ್ಯಾಂಕರ್‌ನಲ್ಲಿ ತರಿಸಿಕೊಳ್ಳಲಾಗುತ್ತಿದೆ. ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಾರ್ಡ್, ಶಸ್ತ್ರ ಚಿಕಿತ್ಸೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ಆಸ್ಪತ್ರೆಯ ಶುದ್ಧ ಕುಡಿವ ನೀರಿನ ಘಟಕಗಳಲ್ಲಿ ನೀರು ಸಣ್ಣಗೆ ಬರುತ್ತಿದ್ದು, ಗಂಟೆಗೊಂದು ಬಾಟಲಿ ತುಂಬುವುದು ಕಷ್ಟ. ಒಳ ರೋಗಿಗಳ ಸಂಬಂಧಿಕರು ರೋಗಿಗಳನ್ನು ಬಿಟ್ಟು ಗಂಟೆಗಟ್ಟಲೆ ನೀರಿಗೆ ಕಾಯುತ್ತಿದ್ದಾರೆ. ಕೆಲವರು ಅನಿವಾರ್ಯವಾಗಿ ಹಣ ನೀಡಿ ಬಾಟಲಿ ನೀರು ಖರೀದಿಸುತ್ತಿದ್ದಾರೆ.

ಬೋರ್‌ವೆಲ್‌ಗಳು ಬತ್ತಿದ್ದರೂ ಹೊಸದಾಗಿ ಕೊಳವೆಬಾವಿ ಕೊರೆಸಲು ಆಸ್ಪತ್ರೆ ಮೇಲ್ವಿಚಾರಕರು ಮುಂದಾಗಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಸ್ಪತ್ರೆ ರೋಗಗಳ ಉಲ್ಬಣ ತಾಣವಾಗಲಿದೆ.

ಸಭೆ ನಡೆಸಿದರೂ ಪ್ರಯೋಜನವಿಲ್ಲ: ಕಳೆದ ತಿಂಗಳು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಸಮಸ್ಯೆಯಾಗದಂತೆ ಎಚ್ಚರವಹಿಸಿ ಎಂದು ಸೂಚಿಸಿದ್ದರು. ಆದರೂ ಜಿಲ್ಲಾಸ್ಪತ್ರೆ ಸಿಬ್ಬಂದಿ ಮಾತ್ರ ‘ಈ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚು’ ಎನ್ನುತ್ತಲೆ ದಿನ ದೂಡುತ್ತಿದ್ದಾರೆ.

ಬೀದಿ ಬೀದಿ ಸುತ್ತಾಟ: ಆಸ್ಪತ್ರೆಯಲ್ಲಿ ನೀರಿನ ಹಾಹಾಕಾರದಿಂದ ಗ್ರಾಮೀಣರು, ಬಡವರು ಬಾಟಲಿ ಹಿಡಿದು ಬೀದಿ ಬೀದಿ ಸುತ್ತುತ್ತಿದ್ದಾರೆ. ಹಳ್ಳಿಗರು ಹೆಚ್ಚಾಗಿ ಅವಲಂಬಿತವಾಗಿರುವ ಆಸ್ಪತ್ರೆಗೆ ನಿತ್ಯ 700ರಿಂದ 800 ಹೊರ ರೋಗಿಗಳು ಬರುವ ಆಸ್ಪತ್ರೆಯಲ್ಲಿ ಕನಿಷ್ಟ 100 ರೋಗಿಗಳು ದಾಖಲಾಗುತ್ತಿದ್ದಾರೆ.

ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಚಿಕಿತ್ಸೆ ದೊರೆಯದಿದ್ದರೆ ರೋಗಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ. ಹಾಗಿದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷೃ ವಹಿಸುತ್ತಿದ್ದಾರೆ. ಜಿಲ್ಲಾ ಶಸ್ತ್ರಚಿಕಿತ್ಸಕರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯುತ್ತಿಲ್ಲ ನಾಗರಿಕ ಸಿ.ಟಿ.ಪ್ರತಾಪ್ ರುದ್ರದೇವ್ ದೂರಿದ್ದಾರೆ.

ಆಸ್ಪತ್ರೆಯಲ್ಲಿನ ನೀರಿನ ಸಮಸ್ಯೆಗೆ ನಿವಾರಣೆಗೆ ಕ್ರಮಕೈಗೊಳ್ಳಲಾಗಿದೆ. ಡಯಾಲಿಸಿಸ್ ಕೇಂದ್ರಕ್ಕೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ತಿಳಿಸಿದ್ದಾರೆ.

ಬೋರ್‌ವೆಲ್ ಬತ್ತಿದ ಕಾರಣ ಟ್ಯಾಂಕರ್ ನೀರು ಹಾಕಿಸಿ ಸಮಸ್ಯೆ ಉಲ್ಬಣಿಸಿದಂತೆ ನೋಡಿಕೊಳ್ಳಲಾಗಿದೆ. ಪಾಯಿಂಟ್‌ಗಳನ್ನು ಗುರುತಿಸಿ ಶೀಘ್ರ ಬೋರ್‌ವೆಲ್ ಕೊರೆಸಲಾಗುತ್ತದೆ ಎಂದು ನಿವಾಸಿ ವೈದ್ಯಾಧಿಕಾರಿ ಡಾ.ಜಿ.ಆನಂದ ಪ್ರಕಾಶ್ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಕೊಳವೆಬಾವಿ ಕೊರೆಸಲು ಈಗಾಗಲೇ ಸೂಚಿಸಿದ್ದೇನೆ. ಶೀಘ್ರ ಆಸ್ಪತ್ರೆಗೆ ಭೇಟಿ ನೀಡಿ ಇತರೆ ಸಮಸ್ಯೆಗಳಿದ್ದಲ್ಲಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *