ಚಿತ್ರದುರ್ಗ: ಕಾರ್ಮಿಕ ಪರ ನೀತಿ ಜಾರಿ ಹಾಗೂ ಹಕ್ಕು ಸಂರಕ್ಷಣೆ ಆಗಲೇಬೇಕು. ಈ ಹಿನ್ನೆಲೆಯಲ್ಲಿ ಜ.8ರಂದು ದೇಶದಾಧ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪ್ರಕಾಶ್ ತಿಳಿಸಿದರು.
ಕಾರ್ಮಿಕ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಿತ್ರದುರ್ಗದಲ್ಲೂ ಅಂದು 2 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರು ಡಿಸಿ ಕಚೇರಿ ಎದುರು ಪ್ರತಿಭಟಿಸಿಲಿದ್ದಾರೆ. ಕೇಂದ್ರ ಸರ್ಕಾರ ದುಡಿವ ಜನರ ಹಕ್ಕುಗಳನ್ನು ಕಡೆಗಣಿಸಿದೆ. ರಾಜ್ಯ ಸರ್ಕಾರವೂ ಕಾರ್ಮಿಕರ ಹಿತ ಮರೆತಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣ ನಿದಿಯಲ್ಲಿರುವ 8 ಸಾವಿರ ಕೋಟಿ ರೂ. ಕಾರ್ಮಿಕರ ಹಿತ ರಕ್ಷಣೆಗೆ ಬಳಕೆ ಆಗುತ್ತಿಲ್ಲ. ಈ ಹಣವನ್ನು ಎಲ್ಲ ಸರ್ಕಾರಗಳು ಅನ್ಯ ಉದ್ದೇಶಕ್ಕೆ ಬಳಸಲು ಮುಂದಾಗಿದ್ದವು. ನಮ್ಮ ಪಕ್ಷದ ಕಾರ್ಮಿಕ ಘಟಕ ಅದಕ್ಕೆ ಅವಕಾಶ ಕೊಟ್ಟಿಲ್ಲ. ಸುಪ್ರೀಂ ಕೋರ್ಟ್ ಆದೇಶದನ್ವಯ ಯಾವ ರಾಜ್ಯದಲ್ಲೂ ಈ ನಿಧಿಯನ್ನು ಬೇರೆ ಕಾರಣಗಳಿಗೆ ಬಳಸುವಂತಿಲ್ಲ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಪಕ್ಷದ ಕಾರ್ಮಿಕ ಘಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರ ಹೆಸರು ನೋಂದಾಯಿಸುವ ಆಂದೋಲನ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸೈಯದ್ ಮುಹಿದ್ದೀನ್ ಚೋಟು, ಮುಖಂಡರಾದ ಪೈಲ್ವಾನ್ ತಿಪ್ಪೇಸ್ವಾಮಿ, ಝಾಕೀರ್ ಹುಸೇನ್, ದಾದಾಪೀರ್ ಮತ್ತಿತರ ಮುಖಂಡರು ಇದ್ದರು.