ಆಟೋ ಚಾಲಕರಿಗೆ ಪರವಾನಗಿ

ಚಿತ್ರದುರ್ಗ: ಚಾಲನಾ ಪರವಾನಗಿ ಇಲ್ಲದೆ ಆಟೋ ಓಡಿಸ ಬಾರದು, ಪರವಾನಗಿ ಇಲ್ಲದವರಿಗೆ ಸಾರಿಗೆ ಇಲಾಖೆ ಅಧಿಕಾರಿಗಳ ಸಹಕಾರದಿಂದ ಕೊಡಿಸಲಾಗುವುದು ಎಂದು ಎಎಸ್ಪಿ ಎಂ.ಬಿ.ನಂದಗಾವಿ ಹೇಳಿದರು.

ನಗರದ ಎನ್‌ಬಿಟಿ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಟೋ ಚಾಲಕರ-ಮಾಲೀಕರ ಸಭೆಯಲ್ಲಿ ಮಾತನಾಡಿ, ಪರವಾನಗಿ ಇಲ್ಲದೆ ಆಟೋಗಳನ್ನು ಓಡಿಸಿ ನೀವು ತೊಂದರೆಗೆ ಒಳಗಾಗಬೇಡಿ, ಮಾಲೀಕರನ್ನೂ ಸಂಕಷ್ಟಕ್ಕೆ ಸಿಲುಕಿಸ ಬೇಡಿ ಎಂದು ಕಿವಿಮಾತು ಹೇಳಿದರು.

ಆಟೋ ಕನಿಷ್ಠ ಪ್ರಯಾಣ ದರ ಹೆಚ್ಚಳಕ್ಕೆ ಜಿಲ್ಲಾ ಪ್ರಾಧಿಕಾರದಲ್ಲಿ ಅವಕಾಶವಿದೆ. ಆದರೆ, ಮೀಟರ್ ಅಳವಡಿಸುವುದು ಅನಿವಾರ್ಯ ಆಗಲಿದೆ. ಆದರೂ ತಮ್ಮ ಅಹವಾಲನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಚರ್ಚಿಸುವುದಾಗಿ ಹೇಳಿದರು.

ಯಾವುದೇ ಕಾರಣಕ್ಕೂ ಶಾಲಾ ಮಕ್ಕಳನ್ನು ಅಧಿಕ ಸಂಖ್ಯೆಯಲ್ಲಿ ಕರೆದೊಯ್ಯಬಾರದು. ನಿಯಮ ಉಲ್ಲಂಘಿಸಿದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.

ಡಿವೈಎಸ್ಪಿ ಸಂತೋಷ್ ಮಾತನಾಡಿ, ನಗರದಲ್ಲಿರುವ 28 ಆಟೋ ನಿಲ್ದಾಣಗಳಲ್ಲಿ 9 ಮಾತ್ರ ಅಧಿಕೃತ. ತಾವೆಲ್ಲರೂ ಸಂಚಾರಿ ನಿಯಮ ಪಾಲಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸಿದರೆ ಉಳಿದ ನಿಲ್ದಾಣಗಳನ್ನು ಅಧಿಕೃತಗೊಳಿಸಲು ಸಾಧ್ಯವಿದೆ. ಎಲ್ಲೆಂದರಲ್ಲಿ ಆಟೋ ನಿಲ್ಲಿಸಿದರೆ ದಂಡ ಕಟ್ಟ ಬೇಕಾಗುತ್ತದೆ ಎಂದರು.

ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಕೆಲ ಆಟೋ ಚಾಲಕರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ದಾಖಲೆಗಳು ನಮ್ಮ ಬಳಿ ಇವೆ. ನಗರದಲ್ಲಿ ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಇಲಾಖೆ ದೃಢ ನಿರ್ಧಾರ ಕೈಗೊಂಡಿದ್ದು, ಉಲ್ಲಂಘಿಸದೆ ಶಿಸ್ತಿನಿಂದ ವರ್ತಿಸುವಂತೆ ಸಲಹೆ ನೀಡಿದರು.

ಕೋಟೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ ಪಾಟೀಲ್, ಸಂಚಾರಿ ಠಾಣೆ ಪಿಐಎಸ್ ರೇವತಿ ಇದ್ದರು.

ರಾತ್ರಿ ವೇಳೆ ಆಟೋ ಓಡಿಸಲು ಸಮ್ಮತಿ ಅಗತ್ಯ: ರಾತ್ರಿ ವೇಳೆ ಆಟೋ ಓಡಿಸುವಂಥವರು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಶನಿವಾರ ರಾತ್ರಿಯಿಂದಲೇ ಸಂಚಾರಿ ಠಾಣೆಯಲ್ಲಿ ಹೆಸರು, ಮೊಬೈಲ್ ಸಂಖ್ಯೆ ನಮೂದಿಸುವುದು ಕಡ್ಡಾಯ. ಒಂದು ವೇಳೆ ಬರೆಸದೆ ಓಡಿಸಿದರೆ ಅಂಥ ಆಟೋಗಳನ್ನು ಸೀಜ್ ಮಾಡಲಾಗುವುದು ಎಂದು ಡಿವೈಎಸ್ಪಿ ಸಂತೋಷ್ ಎಚ್ಚರಿಸಿದರು.