ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪಾಸಾಗಿರುವ ವಿದ್ಯಾರ್ಥಿಗಳ ಮೇಲೆ ಪಾಲಕರು ಒತ್ತಡ ಹಾಕ ಬೇಡಿ. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿದರೇ ಭವಿಷ್ಯ ಉಜ್ವಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಡಿಸಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಶೈಕ್ಷಣಿಕ ಹಾದಿಯಲ್ಲಿ ಎಸ್ಸೆಸ್ಸೆಲ್ಸಿ ಬಹುಮುಖ್ಯ ಘಟ್ಟ ಎಂದರು.
ಅರಿವಿನ ಕೊರತೆ ಜತೆ ಮಕ್ಕಳ ಭವಿಷ್ಯ ರೂಪಿಸುವ ಒತ್ತಡ ಪಾಲಕರ ಮೇಲಿದೆ. ಆದರೆ, ತಮ್ಮ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳಲು ನಿರ್ದಿಷ್ಟ ವಿಷಯವನ್ನೇ ಓದುವಂತೆ ಒತ್ತಡ ಹಾಕುವುದು ಸರಿಯಲ್ಲ. ವಿಷಯ ಆಯ್ಕೆಯನ್ನು ಮಕ್ಕಳಿಗೆ ಬಿಡಿ ಎಂದು ಹೇಳಿದರು.
ಎಲ್ಲರೂ ಇಂಜಿನಿಯರ್, ಡಾಕ್ಟರ್ಗಳಾಗಲು ಸಾಧ್ಯವಿಲ್ಲ. ಕೆಲವರಿಗೆ ವಿಜ್ಞಾನ ಇಷ್ಟವಾದರೆ, ಇನ್ನು ಕೆಲವರಿಗೆ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ತಾಂತ್ರಿಕ ಶಿಕ್ಷಣದ ಆಸಕ್ತಿ ಇರುತ್ತದೆ. ಫ್ಯಾಷನ್ ಡಿಸೈನ್, ಗೃಹ ವಿಜ್ಞಾನ, ಡಿಪ್ಲೋಮಾ, ಪ್ಯಾರಾಮೆಡಿಕಲ್ ಮುಂತಾದ ಹಲವು ಕೋರ್ಸ್ಗಳು ಲಭ್ಯವಿದೆ. ಆದರೆ, ಪಾಲಕರ ಒತ್ತಾಯಕ್ಕೆ ಕಷ್ಟಕರ ಹಾಗೂ ನಿರಾಸಕ್ತ ವಿಷಯದ ಓದಿಗೆ ದಾಖಲಾಗಿ ಕಷ್ಟಪಡುತ್ತಾರೆ ಎಂದರು.
ಉಪನ್ಯಾಸಕರು, ಪ್ರಾಂಶುಪಾಲರು ದಾಖಲಾತಿ ಮಾಡಿಕೊಳ್ಳುವ ಮುನ್ನ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಅವರ ಆಸಕ್ತಿ ಗಮನಿಸಿ ಸಲಹೆ ನೀಡಿದರೆ ಪಿಯುಸಿ ಫಲಿತಾಂಶ ಸುಧಾರಣೆ ಆಗುತ್ತದೆ ಎಂದು ತಿಳಿಸಿದರು.
ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ಬರದ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕಿಚ್ಚು ಹೊತ್ತಬೇಕು. ಈ ನೆಲದ ಅನೇಕರು ಐಎಎಸ್ ಪಾಸಾಗಿ ಉನ್ನತ ಸ್ಥಾನಗಳಿಸಿದ್ದಾರೆ. ಅವರ ಹಾದಿಯಲ್ಲಿ ನೀವುಗಳು ಸಾಗಬೇಕು ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ 625 ಕ್ಕೆ 613 ಅಂಕ ಗಳಿಸಿದ ವಿದ್ಯಾವಿಕಾಸ ಶಾಲೆಯ ವಿ.ಅನುಷಾ, ಗಾರ್ಡಿಯನ್ ಏಂಜಲ್ನ ಕಾವೇರಿ, ಡಿ.ವಿ.ಎಸ್ ಶಾಲೆಯ ಕಾವ್ಯಾ, ಗೂಳಯ್ಯನಹಟ್ಟಿ ಮುರಾರ್ಜಿ ವಸತಿ ಶಾಲೆ ಕೆ.ಶ್ವೇತಾ ಅವರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಸರ್ಕಾರಿ ಪಾಲಿಟೆಕ್ನಿಕ್ನ ಉಪನ್ಯಾಸಕರಾದ ಪ್ರದೀಪ್, ನಯನಾ, ಭಾರತೀಯ ಪುರಾತತ್ವ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಗೋಕುಲ್, ತುಂಬುರುಕಟ್ಟೆ ಮಂಜುನಾಥ ಮಾಹಿತಿ ನೀಡಿದರು.
ಪಿಯು ಡಿಡಿ ಎಂ.ಸಿ.ಶೋಭಾ, ಡಿಡಿಪಿಐ ಎ.ಜೆ.ಅಂಥೋಣಿ, ಬಿಇಒ ಎಸ್.ನಾಗಭೂಷಣ್ ಉಪಸ್ಥಿತರಿದ್ದರು.