ಶಾಸಕರ ವಿರುದ್ಧ ರೈತರ ಆಕ್ರೋಶ

ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಅತಂತ್ರ ಸ್ಥಿತಿಗೆ ಮೂರು ಪಕ್ಷಗಳೂ ಕಾರಣವೆಂದು ಆರೋಪಿಸಿ ರೈತ ಸಂಘ ಕಾರ್ಯಕರ್ತರು ಸೋಮವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಹೊಸದುರ್ಗ, ಹೊಳಲ್ಕೆರೆಯಿಂದ ಆಗಮಿಸಿದ್ದ ರೈತರು ಕನಕ ವೃತ್ತ ಹಾಗೂ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ಭಾಗಗಳಿಂದ ಆಗಮಿಸಿದ್ದ ರೈತರು ಚಳ್ಳಕೆರೆ ಗೇಟ್‌ನಿಂದ ಮೆರವಣಿಗೆ ಮೂಲಕ ಗಾಂಧಿ ಸರ್ಕಲ್‌ನಲ್ಲಿ ಜಮಾಯಿಸಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಶಾಸಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯವನ್ನು ಬರ ಕಾಡುತ್ತಿದೆ, ಎಲ್ಲೆಡೆ ಕುಡಿವ ನೀರು, ಜಾನುವಾರುಗಳಿಗೆ ಮೇವಿನ ತೊಂದರೆ ಉಲ್ಬಣಗೊಂಡಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಇಷ್ಟೇಲ್ಲ ಸಮಸ್ಯೆಗೆ ಜನ ಸಿಲುಕಿದ್ದರೂ ಮೂರು ಪಕ್ಷದ ಶಾಸಕರು ರಾಜಕೀಯ ಮೇಲಾಟದಲ್ಲಿ ತೊಡಗಿರುವುದು ಸರಿಯಲ್ಲ.

ಇಂತಹ ವಾತಾವರಣ ನಿರ್ಮಾಣಗೊಳ್ಳಲು ಮೂರು ಪಕ್ಷಗಳು ಕಾರಣವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಚ್ಯುತಿ ಎದುರಾಗಿದೆ. ರೆಸಾರ್ಟ್‌ಗಳಲ್ಲಿ ಮೋಜು, ಮಸ್ತಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಎಲ್ಲ ಇಲಾಖೆಗಳಲ್ಲಿ ಅಣ್ಣ, ತಮ್ಮಂದಿರ ಹಸ್ತಕ್ಷೇಪ ಹೆಚ್ಚಾಗಿದ್ದರಿಂದಾಗಿ ಕಳೆದ 10 ದಿನಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸ್ಫೋಟ ಉಂಟಾಗಿದೆ. ಇದರಿಂದಾಗಿ ರಾಜ್ಯದ ಗೌರವ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಚಿಕ್ಕಗಬ್ಬಿಗೆರೆ ನಾಗರಾಜ, ಎಲ್.ಮಲ್ಲಿಕಾರ್ಜುನ್, ರಮೇಶ್, ಬಸವರಾಜಪ್ಪ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *