ಅಪಘಾತ ನಿಯಂತ್ರಿಸಲು ಕ್ರಮಕೈಗೊಳ್ಳಿ

ಚಿತ್ರದುರ್ಗ: ರಾ.ಹೆ.48ರ ಜೆಎಂಐಟಿ ವೃತ್ತದಲ್ಲಿ ಪದೇ ಪದೆ ಆಗುತ್ತಿರುವ ಅಪಘಾತಗಳನ್ನು ನಿಯಂತ್ರಿಸುವಂತೆ ಆಗ್ರಹಿಸಿ ಬಜರಂಗದಳ-ಸಂಘ ಪರಿವಾರದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.

ಈ ವೃತ್ತದಲ್ಲಿ ಅತೀ ಹೆಚ್ಚು ಅಪಘಾತಗಳಾಗಿದ್ದು, ನೂರಾರು ಮಂದಿ ಬಲಿಯಾಗುತ್ತಿದ್ದಾರೆ. ಆದ್ದರಿಂದ ತಕ್ಷಣ ಅವಘಡಗಳಿಗೆ ಕಡಿವಾಣ ಹಾಕಲು ತುರ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಅಂಡರ್ ಪಾಸ್ ನಿರ್ಮಾಣಕ್ಕೆ ರಾ.ಹೆ.ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷೃವೇ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ ಎಂದು ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಎಡಿಸಿ ಸಂಗಪ್ಪ, ಈಗಾಗಲೇ ಸಂಬಂಧಿಸಿದ ಪೊಲೀಸ್, ರಾ.ಹೆ., ಲೋಕೋಪಯೋಗಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಮಾಲೋಚನೆ ನಡೆಸಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎಡಿಸಿ ಅವರಿಗೆ ಮನವಿ ಸಲ್ಲಿಸಿದ ಬಳಿಕ ಹೆದ್ದಾರಿ ಪ್ರಾಧಿಕಾರ ಕಚೇರಿಗೂ ತೆರಳಿ ಅಂಡರ್ ಪಾಸ್ ನಿರ್ಮಾಣ ಸಹಿತ ಅಗತ್ಯ ಕ್ರಮಗಳಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಪಿ.ರುದ್ರೇಶ್, ಸಂದೀಪ್, ಶಕ್ತಿ, ವೆಂಕಟೇಶ್, ಸಂಜಯ್ ಜಾಲಿಕಟ್ಟೆ, ಕಿರಣ್, ಯಶವಂತ, ತೇಜು, ಗಿರಿ, ಮನು, ಮಹಾಂತೇಶ್ ಸೇರಿ ಬಜರಂಗದಳ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *