ಸ್ಮಶಾನಗಳ ಭೂಮಿಗೆ ಒತ್ತುವರಿ ಭೀತಿ

ಚಿತ್ರದುರ್ಗ: ನಗರದಲ್ಲಿ ವಿವಿಧ ಧರ್ಮ, ಸಮುದಾಯಗಳಿಗೆಂದೇ ನಿಗದಿಯಾಗಿರುವ 13 ಸ್ಮಶಾನಗಳಿದ್ದು, ಅವುಗಳಿಗೆ ಕಾವಲುಗಾರರಿಲ್ಲದೆ ಒತ್ತುವರಿ ಭೀತಿ ಎದುರಿಸುತ್ತಿವೆ.

ಸ್ಮಶಾನಗಳಿಗೆ ಕಾವಲುಗಾರರನ್ನು ನೇಮಿಸುವ ಜವಾಬ್ದಾರಿ ಇದ್ದರೂ ಅದಕ್ಕೆ ಅಧಿಕಾರ ಇಲ್ಲ ! ನಗರದ ಅಗಳೇರಿ ಕೆಂಚಪ್ಪನ ಬಾವಿ ಸಮೀಪ ಎರಡೂವರೆ ಎಕರೆ ಮಣ್ಣು ಮಾಡುವ, 1.5 ಎಕರೆ ವಿಸ್ತೀರ್ಣದ ಚಿತಾಗಾರವಿರುವ ಮುಕ್ತಿಧಾಮವಿದೆ.

ಆದರೆ, ಅಲ್ಲಿ ಮಣ್ಣು ಮಾಡುವ ಸ್ಮಶಾನ ಭೂಮಿ ಒತ್ತುವರಿ ಭೀತಿ ಎದುರಿಸುತ್ತಿದೆ. ಇದರ ಕಾವಲುಗಾರ ಕೆ.ಎಸ್. ಪುಟ್ಟಸ್ವಾಮಿಗೆ ಕಳೆದ 22 ತಿಂಗಳಿಂದ ಗೌರವಧನ ಸ್ಥಗಿತಗೊಂಡಿದೆ. ಅವರಿಗೆ 1996ರ ಡಿಸೆಂಬರ್‌ನಿಂದ ಮಾಸಿಕ 5 ಸಾವಿರ ರೂ. ಗೌರವಧನ ನೀಡಲಾಗುತ್ತಿತ್ತು.

ನಗರಸಭೆ, ಪುರಸಭೆ, ಪಪಂ ವ್ಯಾಪ್ತಿಯ ಸ್ಮಶಾನಗಳಿಗೆ ಕಾವಲುಗಾರ ಹುದ್ದೆಗಳಿಲ್ಲ. ಹುದ್ದೆ ಮಂಜೂರಾಗದೆ ಫಂಡ್ ಬೇಸ್ಡ್ ಆಕೌಂಟ್ ಸಿಸ್ಟಮ್(ಎಫ್‌ಬಿಎಎಸ್) ತಂತ್ರಾಂಶ ಮೂಲಕ ವೇತನ ಪಾವತಿಸಲು ಸಾಧ್ಯವಿಲ್ಲ. ಆದ್ದರಿಂದ ಪುಟ್ಟಸ್ವಾಮಿಗೆ ಗೌರವಧನ ಪಾವತಿಯಾಗುತ್ತಿಲ್ಲ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಪುಟ್ಟಸ್ವಾಮಿಗೆ ವೇತನ ಪಾವತಿಸುವಂತೆ ಹಿಂದಿನ ಜಿಲ್ಲಾಧಿಕಾರಿ ಆರ್. ಗಿರೀಶ್ ಭರವಸೆ ಕೊಟ್ಟಿದ್ದರು. ಅದರಂತೆ ಈಗಿನ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ 2019 ರ ಮೇ 2 ರಂದು ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಆದರೆ, ಪೌರಾಡಳಿತ ನಿರ್ದೇಶಕರಿಂದ ಇನ್ನೂ ಉತ್ತರ ಬಂದಿಲ್ಲ.

ಸಾರ್ವಜನಿಕರು ವಿವಿಧ ಕ್ಷೇತ್ರದ ಗಣ್ಯರ ಅನಿಸಿಕೆಗಳು:

ಸ್ಮಶಾನ ಜಾಗದ ಒತ್ತುವರಿ ತಡೆಗೆ ಕಾವಲುಗಾರರ ನೇಮಕಕ್ಕೆ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಸ್ಮಶಾನ ಅಭಿವೃದ್ಧಿ ಮತ್ತಿತರ ಕಾಮಗಾರಿಗಳಿಗೆ ಅನುದಾನ ಒದಗಿಸಬೇಕೆಂಬ ಬೇಡಿಕೆಯೂ ನಾಗರಿಕ ವಲಯದಿಂದ ಕೇಳಿ ಬಂದಿದೆ.

ನಗರದ ಸ್ಮಶಾನಗಳಿಗೆ ಕಾಪೌಂಡ್ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಇನ್ನು ಮುಂದಾದರೂ ನಗರದ ಸ್ಮಶಾನಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ನಗರಸಭೆ ದೃಢ ನಿರ್ಧಾರ ಕೈಗೊಳ್ಳಬೇಕಿದೆ-ಪ್ರತಾಪ್ ಜೋಗಿ, ವಕೀಲರು

ಮುಕ್ತಿಧಾಮಕ್ಕೆ ಪೂರ್ಣ ಪ್ರಮಾಣದಲ್ಲಿ ರಕ್ಷಣಾಗೋಡೆ ನಿರ್ಮಿಸಬೇಕಿದೆ. ಜತೆಗೆ ಕೆಂಚಪ್ಪನ ಬಾವಿಯನ್ನು ಇತ್ತೀಚೆಗೆ ಸ್ವಚ್ಛಗೊಳಿಸಲಾಗಿದ್ದು, ಅದರ ಸುತ್ತ ಮೆಸ್ ಹಾಕಿಸುವ ಮೂಲಕ ಮತ್ತೆ ಬಾವಿ ಕೊಳಕಾಗದಂತೆ ಎಚ್ಚರಿಕೆ ವಹಿಸಬೇಕಿದೆ-ಟಿ.ಎಲ್.ಮಂಜುನಾಥ್, ಕೋಳಿ ಬುರುಜನಹಟ್ಟಿ, ದೊಡ್ಡಪೇಟೆ.

ಕಳೆದ 22 ತಿಂಗಳಿಂದ ನನಗೆ ವೇತನ ನಿಲ್ಲಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ. ಚಿತಾಗಾರದಲ್ಲಿ ಕಾವಲುಗಾರನ ಮನೆ ಇರುವುದರಿಂದ ವಾಸಕ್ಕೆ ತೊಂದರೆಯಾಗಿಲ್ಲ-ಕೆ.ಎಸ್.ಪುಟ್ಟಸ್ವಾಮಿ, ಕಾವಲುಗಾರ, ಮುಕ್ತಿಧಾಮ, ಚಿತ್ರದುರ್ಗ.

ಹಿಂದಿನ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರನ್ನು ಭೇಟಿ ಮಾಡಿ ಕಾವಲುಗಾರನ ವೇತನ ಬಿಡುಗಡೆಗೆ ಮನವಿ ಮಾಡಿದ್ದೆವು. ಆದರೂ, ಇನ್ನೂ ಪಾವತಿಗೆ ಕ್ರಮ ಕೈಗೊಂಡಿಲ್ಲ. ಮುಕ್ತಿಧಾಮದಲ್ಲಿ ಗ್ಯಾಸ್‌ಛೇಂಬರ್ ಸ್ಥಾಪಿಸುವ ಇರಾದೆ ಇದೆ-ಎಲ್.ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ, ಚಿತ್ರದುರ್ಗ.

ಅಂದಾಜು 15 ಲಕ್ಷ ರೂ. ವೆಚ್ಚದಲ್ಲಿ ಮುಕ್ತಿಧಾಮದ ಅಭಿವೃದ್ಧಿಗೆ ಅನುಮತಿ ಕೋರಿ ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಪೌರಾಡಳಿತ ನಿರ್ದೇಶಕರಿಂದ ಅನುಮತಿ ಸಿಗುತ್ತಿದ್ದಂತೆ ಅಭಿವೃದ್ಧಿ ಕೆಲಸ ಆರಂಭಿಸಲಾಗುವುದು-ಸಿ. ಚಂದ್ರಪ್ಪ, ಆಯುಕ್ತರು, ನಗರಸಭೆ ಚಿತ್ರದುರ್ಗ.