More

    ಸ್ವಚ್ಛತೆಗೆ ಬೀದಿ ಬದೀಲಿ ಬಿದಿರು ಬುಟ್ಟಿ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ನಗರದ ಸ್ವಚ್ಛತೆಗೆ ನಗರಸಭೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ವಾಣಿಜ್ಯ ಸ್ಥಳಗಳಲ್ಲಿ ಕಸ ರಸ್ತೆ ಬದಿ ಬೀಸಾಡುವುದನ್ನು ತಪ್ಪಿಸಲು ನೂರು ಬಿದರಿನ ಬುಟ್ಟಿ ಅಳವಡಿಸಿದೆ.

    ಸ್ವಚ್ಛ ಸರ್ವೆಕ್ಷಣ್-2020ರ ಒಂದು ಲಕ್ಷ ಜನಸಂಖ್ಯೆ ಮೀರಿರುವ ರಾಜ್ಯದ ನಗರಸಭೆಗಳ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಚಿತ್ರದುರ್ಗ ನಗರಸಭೆ, ಸ್ವಚ್ಛತೆ ನಿಟ್ಟಿನಲ್ಲಿ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ.

    ಬಿ.ಡಿ.ರಸ್ತೆ, ಲಕ್ಷ್ಮೀಬಜಾರ್, ನಗರಸಭೆ ಕಚೇರಿ, ಸಂತೆ ಹೊಂಡ ಮತ್ತಿತರ ಕಮರ್ಷಿಯಲ್ ಸ್ಟ್ರೀಟ್ಸ್‌ಗಳಲ್ಲಿ ಬುಟ್ಟಿಗಳನ್ನು ಅಳವಡಿಸಲಾಗಿದೆ.

    ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ ಸಹಿತ ಇನ್ನಷ್ಟು ಜನದಟ್ಟಣೆ ಸ್ಥಳಗಳಲ್ಲಿ ಮತ್ತೆ ಅಂದಾಜು 100 ಬುಟ್ಟಿ ಅಳವಡಿಸಲಾಗುತ್ತಿದೆ. ಈ ಮೊದಲು ತ್ಯಾಜ್ಯ ಹಾಕಲು ಪ್ಲಾಸ್ಟಿಕ್, ಕಬ್ಬಿಣದ ತೊಟ್ಟಿ ಇಡಲಾಗಿತ್ತು. ಆದರೆ, ಇವುಗಳು ಉಪಯೋಗಕ್ಕೆ ಬದಲು ಕಳ್ಳರ ಪಾಲಾಗಿದ್ದೇ ಹೆಚ್ಚು.

    ಆದ್ದರಿಂದ ಬಿದಿರು ಬುಟ್ಟಿಗಳನ್ನು ಪ್ರಸ್ತು ಅಳವಡಿಸುತ್ತಿದ್ದು, ಇವು ಕನಿಷ್ಠ ಒಂದು ವರ್ಷ ಬಾಳಿಕೆ ಬರಲಿವೆ. ಬುಟ್ಟಿಯಲ್ಲಿ ಸಂಗ್ರಹವಾಗುವ ಕಸವನ್ನು, ಕಸದ ವಾಹನಗಳಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ.

    ಹಸಿ ಕಸ, ಒಣ ಕಸ: ನಗರಸಭೆಯಿಂದ ಪ್ರಸ್ತುತ ಹಸಿ, ಒಣ ಕಸ, ಇ ತ್ಯಾಜ್ಯ ಹಾಗೂ ಸ್ಯಾನಿಟರಿ ವೇಸ್ಟ್‌ನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ತರಕಾರಿ ಮೊದಲಾದ ಹಸಿ ಕಸ, ಇತರೆ ಒಣ ಕಸ ಹಾಗೂ ಬ್ಯಾಟರಿ ಶೆಲ್ ಮೊದಲಾದ ನಿರುಪಯುಕ್ತ ವಿದ್ಯುತ್ ಉಪಕರಣಗಳು ಹಾಗೂ ಸ್ಯಾನಿಟರಿ ವೇಸ್ಟ್‌ನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಕಸ ಸಂಗ್ರಹಣೆ ವಾಹನಗಳಿಗೆ ಕೊಡುವಂತೆ ನಗರಸಭೆ ಜಾಗೃತಿ ಮೂಡಿಸಿದೆ. ಆದರೂ ಅನೇಕರು ಕಸ ವಿಂಗಡಿಸಿ ಕೊಡುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

    ಕಸದಿಂದ ಗೊಬ್ಬರ ತಯಾರಿಕೆ: ದ್ಯಾಮವ್ವನಹಳ್ಳಿ ಬಳಿಯ 35 ಎಕರೆ ವಿಸ್ತೀರ್ಣದ ಲ್ಯಾಂಡ್ ಫಿಲ್ಲಿಂಗ್ ಸೈಟ್‌ನಲ್ಲಿ ಕಸ ವಿಂಗಡಣೆ ಕಾರ್ಯ ನಡೆದಿದೆ. ಕಳೆದ ಐದಾರು ತಿಂಗಳಿಂದ ಇಲ್ಲಿ ಕಸದಿಂದ ಅಂದಾಜು 10 ಟನ್ ಗೊಬ್ಬರ ತಯಾರಿಸಲಾಗಿದೆ. ಇದನ್ನು ಹರಾಜು ಮೂಲಕ ಮಾರಾಟ ಮಾಡಲಾಗುವುದು. ಒಂದು ಟನ್‌ಗೆ ಕನಿಷ್ಠ 5 ಸಾವಿರ ರೂ. ದರದಂತೆ ಗೊಬ್ಬರ ಮಾರಾಟ ಸಾಧ್ಯತೆ ಇದೆ. ಇನ್ನು ಮರು ಬಳಕೆ ಸಾಧ್ಯವಿರುವ ರಟ್ಟು, ಪ್ಲಾಸ್ಟಿಕ್ ಬೇಲ್‌ಗಳನ್ನು ಸಿದ್ಧ್ದಪಡಿಸಿ ಮಾರಾಟ ಮಾಡಲಾಗುವುದು ಎನ್ನುತ್ತಾರೆ ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು.

    ಕಸ ವಿಂಗಡಿಸಿ ಕೊಡಲಿ: ನಿರುಪಯುಕ್ತ ವಿದ್ಯುತ್ ಉಪಕರಣಗಳಲ್ಲಿರುವ ವಿಷಕಾರಿ ವಸ್ತುಗಳು ಭೂಮಿ ಮತ್ತು ನೀರನ್ನು ಕಲುಷಿತಗೊಳಿಸುತ್ತವೆ. ಇತರೆ ತ್ಯಾಜ್ಯ ದಲ್ಲಿ ಸೇರಿರುವ ಸ್ಯಾನಿಟರಿ ವೇಸ್ಟ್‌ಗಳಿಂದ ಸಾಂಕ್ರಾಮಿಕ ರೋಗ ಹರಡಲಿದ್ದು,ನಾಗರಿಕರು ಪ್ರತಿ ಕಸವನ್ನು ವಿಂಗಡಿಸಿ ಕೊಡ ಬೇಕೆನ್ನುತ್ತಾರೆ ನಗರಸಭೆ ಪರಿಸರ ಇಂಜಿನಿಯರ್ ಜೆ.ಜಾಫರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts