ಮಳೆ ಕೊರತೆ, ಕುಸಿದ ಬಿತ್ತನೆ ಪ್ರಮಾಣ

ಚಿತ್ರದುರ್ಗ: ಮುಂಗಾರು ಪೂರ್ವ, ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಬಾರದೇ ಜಿಲ್ಲೆ ಮತ್ತೆ ಬರದ ದವಡೆಗೆ ಸಿಲುಕುವ ಆತಂಕಕ್ಕೆ ಸಿಲುಕಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇತ್ತೀಚೆಗೆ ಸುರಿದ ಅಲ್ಪಸ್ವಲ್ಪ ಮಳೆಯಿಂದ ಹರ್ಷಚಿತ್ತರಾಗಿ ಭೂಮಿ ಹಸನು ಮಾಡಿಕೊಂಡಿದ್ದ ರೈತರ ಮುಖದಲ್ಲೀಗ ಚಿಂತೆಯ ನೆರಿಗೆಗಳು ಮೂಡಿವೆ.

ಜಿಲ್ಲೆಯ ಮುಂಗಾರು 3,58,340 ಹೆ.ಬಿತ್ತನೆ ಗುರಿಯಲ್ಲಿ ಈವರೆಗೂ 3655 ಹೆ.ಬಿತ್ತನೆಯಾಗಿರುವುದು ಬರದ ಬವಣೆಯನ್ನು ಅನಾವರಣಗೊಳಿಸಿದೆ. ಶೀಘ್ರ ಮಳೆಯಾಗದಿದ್ದರೆ ಪ್ರಮುಖ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ರಾಗಿ, ತೊಗರಿ, ಹತ್ತಿ, ಸೂರ‌್ಯಕಾಂತಿ ಹಾಗೂ ಸಿರಿಧಾನ್ಯಕ್ಕೆ ಕುತ್ತಾಗಲಿದೆ.

ಜಿಲ್ಲೆಯನ್ನು ಸತತ ಬರ ಕಾಡಿದ್ದರೂ ಬಿತ್ತನೆ ಕಾರ‌್ಯ ಸಕಾಲಕ್ಕೆ ಆಗುತ್ತಿತ್ತು. ಆದರೆ ಈ ಬಾರಿ ಬಿತ್ತನೆ ಪ್ರಮಾಣವೂ ಕುಂಠಿತವಾಗಿದೆ. ಈ ಹೊತ್ತಿಗೆ 21000 ಹೆ.ಬಿತ್ತನೆಯಾಗಬೇಕಿತ್ತು. ಕಳೆದ ವರ್ಷ ಈ ಅವಧಿಯಲ್ಲಿ 12000 ಹೆ. ಬಿತ್ತನೆ ಆಗಿತ್ತು.

ಎಳ್ಳು, ಹೆಸರು ಇಲ್ಲ: ಈ ಬಾರಿ 1650 ಹೆ.ಎಳ್ಳು ಬಿತ್ತನೆ ಗುರಿಯಲ್ಲಿ 20 ಹೆ.ಹಾಗೂ ಹೆಸರು 5150 ಹೆ.ಗುರಿಯಲ್ಲಿ 249 ಹೆ.ಬಿತ್ತನೆ ಆಗಿದೆ. ಸದ್ಯಕ್ಕೆ ಕೃಷಿ ಇಲಾಖೆ ಬಳಿ 17631 ಟನ್ ರಸಗೊಬ್ಬರ ದಾಸ್ತಾನು ಇದೆ. 80455 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಬಿತ್ತನೆ ಬೀಜಗಳ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ಕಳ್ಳೆನವರ್ ತಿಳಿಸಿದ್ದಾರೆ.

ಸಾವಯವ ಗೊಬ್ಬರ, ಶೇ.50 ರಿಯಾಯಿತಿ ದರದಲ್ಲಿ ಹಸಿರೆಲೆ ಗೊಬ್ಬರ ಲಭ್ಯವಿದೆ. ಒಂದು ಎಕರೆಯಲ್ಲಿ ಆರು ಟನ್‌ಗೆ ಆಗುವಷ್ಟು ಹಸಿರೆಲೆ ಗೊಬ್ಬರದ ಎಲೆ ಬೆಳೆಯಲು ಅವಕಾಶವಿದೆ. ಬಿತ್ತನೆ ಬೀಜದ ಸಹಾಯಧನ ಪಡೆಯಲು ಫ್ರೂಟ್ಸ್ ಮೂಲಕ ಹೆಸರು ನೋಂದಾಯಿಸಬೇಕು. ಒಂದು ವೇಳೆ ತಾಂತ್ರಿಕ ತೊಂದರೆಯಾದರೆ ರೈತ ಸಂಪರ್ಕ ಕೇಂದ್ರಕ್ಕೆ ಬರುವ ರೈತರನ್ನು ಹಿಂದಕ್ಕೆ ಕಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗೋಶಾಲೆ, ಮೇವು ಬ್ಯಾಂಕ್‌ಗಳ ಮುಂದುವರಿಕೆ: ಜಿಲ್ಲೆಯ ವಿವಿಧೆಡೆ ತೆರೆದಿರುವ 15 ಗೋಶಾಲೆ ಹಾಗೂ 9 ಮೇವು ಬ್ಯಾಂಕ್‌ಗಳನ್ನು ಸದ್ಯಕ್ಕೆ ಮುಂದುವರಿಸುವುದಾಗಿ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ದೂರವಾಣಿ ಮೂಲಕ ನೀಡಿದ ಆದೇಶದಂತೆ ಗೋ ಶಾಲೆ, ಮೇವು ಬ್ಯಾಂಕ್‌ಗಳನ್ನು ಮುಂದುವರಿಸಲಾಗಿದೆ ಎಂದು ಡಿಸಿ ಹೇಳಿದ್ದಾರೆ.

ಸಚಿವರನ್ನು ಸಂಪರ್ಕಿಸಿದ ಶಾಸಕ: ಜಿಲ್ಲಾಡಳಿತ ಗೋ ಶಾಲೆಗಳನ್ನು ಮುಚ್ಚಲಿದೆ ಎಂದು ಗೊತ್ತಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಂಗಳೂರಲ್ಲಿದ್ದ ಸಚಿವರನ್ನು ಸಂಪರ್ಕಿಸಿ ಡಿಸಿ ಅವರಿಗೆ ಸೂಚನೆ ಕೊಡಿಸಿದ್ದಾರೆ. ಗೋ ಶಾಲೆ ಮುಂದುವರಿಕೆಗೆ ಆದೇಶಿಸಿದ ಸಚಿವರಿಗೆ ಜಿಲ್ಲೆ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ರಘುಮೂರ್ತಿ ತಿಳಿಸಿದ್ದಾರೆ.