ಬರ ಎದುರಿಸಲು ಜಲಶಕ್ತಿ ಭಾಗ್ಯ

ಚಿತ್ರದುರ್ಗ: ನೀರಿನ ಸಮಸ್ಯೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ನೂತನ ಜಲಶಕ್ತಿ ಯೋಜನೆ ಮೊಳಕಾಲ್ಮೂರು ತಾಲೂಕು ಹೊರತುಪಡಿಸಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಯೋಜನೆ ಜಿಲ್ಲಾ ನೋಡೆಲ್ ಅಧಿಕಾರಿ ರವಿಶಂಕರ್ ಪ್ರಸಾದ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಲಶಕ್ತಿ ಅಭಿಯಾನ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದರು.

ಭವಿಷ್ಯದಲ್ಲಿ ನೀರಿನ ಬರ ನಿಯಂತ್ರಿಸಲು ಜಲ ಸಂರಕ್ಷಣೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. ಮಳೆ ಕೊರತೆ ಹಿನ್ನೆಲೆ ಯಲ್ಲಿ ರಾಜ್ಯದ ಹಲವೆಡೆ ನೀರಿನ ತೀವ್ರ ಅಭಾವ ಎದುರಾಗಿದೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲೂ ನೀರಿನ ಸಮಸ್ಯೆ ಇದ್ದು, ಜಲಶಕ್ತಿ ಅಭಿಯಾನದಡಿ ಆಯ್ಕೆಯಾಗಿರುವ ತಾಲೂಕುಗಳಲ್ಲಿ ನೀರಿನ ಸಂರಕ್ಷಣೆ, ಮಳೆ ನೀರು ಕೊಯ್ಲು, ಕೊಳವೆಬಾವಿ ಮರುಪೂರಣ, ಜಲಾನಯನ ಅಭಿವೃದ್ಧಿ, ಅರಣ್ಯೀಕರಣ ಹಾಗೂ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸ ಬೇಕಿದೆ.

ರಸ್ತೆ ಬದಿಗಳಲ್ಲಿ ಗಿಡ ನೆಟ್ಟು ಪೋಷಿಸಬೇಕು. ಅರಣ್ಯ ಸಂರಕ್ಷಣೆ ಕೆಲಸವೂ ಆಗಬೇಕು. ಜಿಲ್ಲೆಯಲ್ಲಿ ಪ್ರತಿವರ್ಷ ವಾಡಿಕೆಗಿಂತ ಮಳೆ ಕಡಿಮೆಯಾಗುತ್ತಿದ್ದು, ನೀರಿನ ಅಭಾವವನ್ನು ರೈತರು ಅನುಭವಿಸುತ್ತಿದ್ದಾರೆ. ಆದ್ದರಿಂದ ಹೆಚ್ಚು ನೀರು ಬಯಸುವ ಬೆಳೆಗಳ ಪರ್ಯಾಯವಾಗಿ ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ಬರುವಂಥ ಬೆಳೆಗಳಿಗೆ ರೈತರ ಮನವೊಲಿಸಬೇಕು. ಉಪಗ್ರಹಗಳ ಸಹಾಯದಿಂದ ನೀರಿನ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದರು.

ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ನಾನಾ ಬೆಳೆಗಳ ಇಳುವರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 166 ಕೆರೆಗಳು, 427 ಚೆಕ್‌ಡ್ಯಾಂ, 6939 ನೀರು ಸಂಗ್ರಹಣ ಗುಂಡಿ ಹಾಗೂ 136 ಜಿಪಂ ಕೆರೆಗಳಿದ್ದು, 306 ಬಹುಹಂತದ ಚೆಕ್‌ಡ್ಯಾಂ ಜಿಲ್ಲಾದ್ಯಂತ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ರಾಗಿ, ಜೋಳ, ಈರುಳ್ಳಿ, ಮೆಕ್ಕೆಜೋಳ ಸೇರಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಜಲಾಮೃತ ಯೋಜನೆಯಡಿ 109 ಕೆರೆಗಳ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ ಎಂದರು.

ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ತುಂಬಿಸಿದರೆ ಅಂತರ್ಜಲದ ಮಟ್ಟ ಹೆಚ್ಚಾಗಿ, ರೈತರಿಗೆ ನೆರವಾಗಲಿದೆ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿಗಳಾದ ಸುಪ್ರಿಯ ಸಹಾಯ್, ದಯಾಶಂಕರ್, ತಾಂತ್ರಿಕ ಸಹಾಯಕರಾದ ಶಿವಕೃಷ್ಣನ್, ಹರೇಂದ್ರಸಿಂಗ್, ಎಸಿ ಎ.ಬಿ.ವಿಜಯ್‌ಕುಮಾರ್ ಇದ್ದರು.


ನರೇಗಾದಡಿ ಜಿಲ್ಲಾದ್ಯಂತ ಕೃಷಿ ಹೊಂಡ, ಚೆಕ್‌ಡ್ಯಾಂ ನಿರ್ಮಿಸಲಾಗುತ್ತಿದೆ. ಸ್ವಚ್ಛ ಮೇವ ಜಯತೆ ಅಭಿಯಾನದಡಿ ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರ ಸಮೃದ್ಧಿಗೆ ಹಾಗೂ ಕೃಷಿ ವನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮಾ ತಿಳಿಸಿದರು.

ಸಮಗ್ರ ಯೋಜನೆ: ಜಲಶಕ್ತಿ ಯೋಜನೆಯಡಿ ನಿರ್ದಿಷ್ಟ ಅನುದಾನ ಲಭ್ಯವಾಗದು. ಆದರೆ, ಈಗಿರುವ ಯೋಜನೆಗಳನ್ನೇ ಬಳಸಿಕೊಂಡು ಜಲ ಸಂರಕ್ಷಣೆಗೆ ಸಮಗ್ರ ಯೋಜನೆ ರೂಪಿಸ ಬೇಕಿದೆ. ಅಂತರ್ಜಲ ಮಟ್ಟವನ್ನು ಆಧರಿಸಿ ತಾಲೂಕುಗಳ ಆಯ್ಕೆಯಾಗಿದೆ. ಸಭೆಯ ಬಳಿಕ ಚಳ್ಳಕೆರೆಗೆ ಭೇಟಿ ಕೊಟ್ಟಿದ್ದೇವೆ. ಶುಕ್ರವಾರ ಹಿರಿಯೂರಿಗೆ ತೆರಳಿ ಜಲ ಸಂರಕ್ಷಣೆ ಕಾಮಗಾರಿಗಳನ್ನು ವೀಕ್ಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು.

Leave a Reply

Your email address will not be published. Required fields are marked *