ಫಲ ನೀಡಿತು ಮೋದಿ ರ‌್ಯಾಲಿ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ರ‌್ಯಾಲಿ ವ್ಯರ್ಥವಾಗಲಿಲ್ಲ ! ಪಕ್ಷ ಸಂಘಟನೆಗೆ ಬಿಎಸ್‌ವೈ ಹಾಕಿದ ಬುನಾದಿ ಮೇಲೆ ಬಿಜೆಪಿ ಕೋಟೆ ಕಟ್ಟಲು ನಮೋ ರ‌್ಯಾಲಿ ನೆರವಿಗೆ ಬಂದಿತು.

ಏಪ್ರಿಲ್ 9ರಂದು ಮೋದಿ ರ‌್ಯಾಲಿಗೆ ಸೇರಿದ್ದ ಜನಸಾಗರ ಅಂದೇ ಚಿತ್ರದುರ್ಗ ಕ್ಷೇತ್ರದ ಫಲಿತಾಂಶದ ದಿಕ್ಕನ್ನು ಹೆಚ್ಚು-ಕಡಿಮೆ ನಿರ್ಧರಿಸಿದಂತಿತ್ತು.

ಪ್ರಧಾನಿ ಬರುವ ಮುಂಚೆ ಕಾಂಗ್ರೆಸ್ ಪಕ್ಷವೇ ಗೆಲುವಿನ ಫೆವರೇಟ್ ಆಗಿತ್ತಾದರೂ ಆನಂತರದ ದಿನಗಳಲ್ಲಿ ನಡೆದಿದ್ದೆಲ್ಲವೂ ಮೋದಿ ಮೇನಿಯಾ.

ಬಿಜೆಪಿ ಅಭ್ಯರ್ಥಿ ಎ.ನಾರಾಯಣ ಸ್ವಾಮಿ ಮೋದಿ ಅಲೆಯಲ್ಲಿ ಈಜಿ ಗೆಲುವಿನ ದಡ ಸೇರಿದರು. ಅಷ್ಟೇ ಅಲ್ಲ ಕಳೆದೊಂದು ದಶಕದ ರಾಜಕೀಯ ಅಜ್ಞಾತವಾಸ ಮುಗಿಸಿ ಲೋಕಸಭೆಗೆ ಭರ್ಜರಿ ಪ್ರವೇಶ ಪಡೆದರು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಮೋದಿ ಸುನಾಮಿಗೆ ಜಿಲ್ಲೆಯ ಆರು ವಿಧಾನ ಸಭೆ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಧೂಳಿಪಟ ಆಗಿತ್ತು. ಲೋಕಸಭೆ ಚುನಾವಣೆಯಲ್ಲೂ ಮೋದಿ ಕಮಾಲ್ ಮಾಡಿದ್ದಾರೆ.

ಈ ಫಲಿತಾಂಶ ಗಮನಿಸಿದರೆ ಕಮಲಪಡೆ ತನ್ನ ವೋಟ್ ಬ್ಯಾಂಕ್ ಮೀರಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಬುಟ್ಟಿಗೂ ಕೈ ಹಾಕಿರುವುದು ಸ್ಪಷ್ಟ. ಅಷ್ಟರ ಮಟ್ಟಿಗೆ ಬಿಜೆಪಿಯ ಸ್ಟಾೃಟರ್ಜಿ ವರ್ಕೌಟ್ ಆಗಿದೆ.

ಆನೇಕಲ್ ನಾರಾಯಣ ಸ್ವಾಮಿ ಕೊನೇಗಳಿಗೆಯಲ್ಲಿ ಚಿತ್ರದುರ್ಗಕ್ಕೆ ಬಂದು ಚುನಾವಣೆ ಗೆಲ್ಲುತ್ತಾರೆ ಎಂದರೆ ಅದಕ್ಕೆ ಮೋದಿ ಅಲೆ ಹಾಗೂ ಪಕ್ಷದ ಸಂಘಟನಾ ಶಕ್ತಿಯೇ ಕಾರಣ.

ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಪಡೆ ನಿಧಾನ ಕರಗುತ್ತಿದೆ. ಪಕ್ಷ ಕಟ್ಟಬೇಕಾದ ಮುಖಂಡರು ಭಾಷಣಕ್ಕೆ ಸೀಮಿತರಾಗುತ್ತಿದ್ದಾರೆ ಎಂಬ ಆರೋಪ ಕಾಂಗ್ರೆಸ್‌ನೊಳಗಿಂದಲೇ ಕೇಳಿ ಬಂದಿದೆ.

ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು ಪ್ರಧಾನಿ ಮೋದಿಯ ಧನಾತ್ಮಕ ಚಿಂತನೆಗಳನ್ನು ಮನೆ, ಮನೆಗೆ ತಲುಪಿಸಲು ಹೇಗೆ ಶ್ರಮಿಸಿದರೋ ಹಾಗೆ ಕಾಂಗ್ರೆಸ್‌ಗೆ ಕೆಲಸ ಮಾಡಲಾಗಲಿಲ್ಲ. ಅಂತದ್ದೊಂದು ನೆಟ್‌ವರ್ಕ್ ರೂಪಿಸಲು ಪಕ್ಷ ಸೋತಿತು ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

Leave a Reply

Your email address will not be published. Required fields are marked *