ಚಿತ್ರದುರ್ಗ: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ವಿವಾದದ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ಯಾವುದೇ ಸಹಕಾರ ಹಾಗೂ ಅನುದಾನ ಕೊಡುವುದಿಲ್ಲವೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಪುನರುಚ್ಚರಿಸಿದರು.
ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಗಡೆ ಅವರಿಗೆ ಬ್ಯಾಲೆಟ್ ಮೇಲಿನ ನಂಬಿಕೆಗಿಂತ, ಬುಲೆಟ್ ಮೇಲೆ ನಂಬಿಕೆ ಅಧಿಕ ಎಂದು ಆರೋಪಿಸಿದರು.
ಅನುದಾನ ಪಡೆಯುವಂಥ ಸಂಸ್ಥೆಗಳು ಸರ್ಕಾರದ ರೀತಿ, ರಿವಾಜುಗಳಿಗೆ ಬದ್ಧವಾಗಿರಬೇಕು. ಅನುದಾನ ಕೊಡದಿದ್ದರೂ ಪರವಾಗಿಲ್ಲ, ದೇಣಿಗೆಯೊಂದಿಗೆ ಸಮ್ಮೇಳನ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಅವರು ಸ್ವತಂತ್ರರು. ಸಾಹಿತ್ಯ ಸಮ್ಮೇಳನಗಳು ಸಾಂಸ್ಕೃತಿಕ ಪರಿಸರದಲ್ಲಿ ನಡೆಯಬೇಕು ಎಂಬುದು ನಮ್ಮ ಅಭಿಪ್ರಾಯ ಎಂದರು.
ವೈಚಾರಿಕ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ನಾನು ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಎಡಪಂಥೀಯರು ಸಮ್ಮೇಳಾಧ್ಯಕ್ಷರಾಗಿದ್ದಲೂ ಅದ್ಧೂರಿಯಿಂದ ಸಮ್ಮೇಳನಗಳು ಆಗಿವೆ. ಕಾನೂನು ಸುವ್ಯವಸ್ಥೆಯ ವಿರುದ್ಧದ ವಾತಾವರಣವಿದ್ದಾಗ ಅನುದಾನ ತಡೆಯುವುದು ನ್ಯಾಯಸಮ್ಮತ ಎಂದು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ, ಬೆಂಗಳೂರಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದಿಕ್ಸೂಚಿ ಭಾಷಣಕ್ಕೆಂದು ಆಹ್ವಾನಿಸಿದ್ದ ಚಕ್ರವರ್ತಿ ಸೂಲಿಬೆಲೆ ಅವರನ್ನು ಅಂದು ನೀವು ವಿರೋಧಿಸಿದ್ದೀರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ನೆನಪಿಸಿದ ಸಚಿವರು, ಈಗ ಜಿಲ್ಲಾ ಸಮ್ಮೇಳನಾಧ್ಯಕ್ಷರ ವಿವಾದ ಕುರಿತಂತೆ ಟೀಕಿಸಲು ನಿಮಗೆ ಯಾವ ಹಕ್ಕು ಇದೆ ಎಂದು ಪ್ರಶ್ನಿಸಿದರು.
ಸಿಎಎ, ಎನ್‌ಆರ್‌ಸಿಯನ್ನು ಕೆಲವರು ದುರುದ್ದೇಶದಿಂದ, ಇನ್ನು ಕೆಲವರು ಮುಗ್ಧತೆಯಿಂದ ವಿರೋಧಿಸುತ್ತಿದ್ದಾರೆ. ಪ್ರತಿಷ್ಠಾನ ಪ್ರಶಸ್ತಿ ಮೊತ್ತವನ್ನು ನಾನು ಅಧಿಕಾರಕ್ಕೆ ಬಂದ ನಂತರದಲ್ಲಿ ಕಡಿತಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ನೆರೆ ಹಾವಳಿ ಪರಿಹಾರಕ್ಕೆ ಕೇಂದ್ರ ಸೂಕ್ತ ರೀತಿಯಲ್ಲೇ ನೆರವಾಗುತ್ತಿದೆ. ಚಿತ್ರದುರ್ಗ ಕೋಟೆ, ಚಂದ್ರವಳ್ಳಿ ಮತ್ತಿತರ ಪ್ರವಾಸಿ ತಾಣಗಳ ಅಭಿವೃದ್ಧಿಗೆ 28 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ ಎಂದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಟಿ.ಬದ್ರಿನಾಥ್ ಮತ್ತಿತರರು ಇದ್ದರು.