ಮಂತ್ರಿಗಿರಿ ಲೆಕ್ಕಾಚಾರ ಶುರು

ಚಿತ್ರದುರ್ಗ: ರಾಜ್ಯ ರಾಜಕೀಯದ ಮೇಲಾಟ ಬಹುತೇಕ ಅಂತಿಮ ಘಟ್ಟ ತಲುಪಿರುವ ಬೆನ್ನಲ್ಲೇ ಸಚಿವ ಸ್ಥಾನದ ಲೆಕ್ಕಾಚಾರ ಚುರುಕಾಗಿದೆ.

ಸಮ್ಮಿಶ್ರ ಸರ್ಕಾರ ವಿಶ್ವಾಸಮತ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಈ ನಡುವೆ ಜಿಲ್ಲೆಯ ಹಿರಿಯ ಶಾಸಕರು, ಬಿ.ಎಸ್.ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು ಮಂತ್ರಿಗಿರಿಯ ವಿಶ್ವಾಸದಲ್ಲಿದ್ದಾರೆ.

ಎಲ್ಲ ಬೆಳವಣಿಗೆ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿವೆ. ಮೊಳಕಾಲ್ಮೂರು ಶಾಸಕರಿಗೆ ಡಿಸಿಎಂ ಸ್ಥಾನ ನೀಡದಿದ್ದರು ಪ್ರಭಾವಿ ಖಾತೆ ನೀಡುವುದು ಬಹುತೇಕ ಖಚಿತ.

ಮೊಳಕಾಲ್ಮೂರು ಶಾಸಕರನ್ನು ಹೊರತುಪಡಿಸಿ ಜಿಲ್ಲೆಯ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಹಿರಿತನದಲ್ಲಿ, ಎಂ.ಚಂದ್ರಪ್ಪ ಬಿಎಸ್‌ವೈ ಆಪ್ತವಲಯ, ಪೂರ್ಣಿಮಾ ಶ್ರೀನಿವಾಸ್ ಯಾದವ ಮತ್ತು ಮಹಿಳಾ ಕೋಟಾದಡಿ ಸಚಿವ ಸ್ಥಾನದ ಮುಂಚೂಣಿಯಲ್ಲಿದ್ದಾರೆ. ಇನ್ನೂ ಹೊಸದುರ್ಗದ ಗೂಳಿಹಟ್ಟಿ ಶೇಖರ್‌ಗೆ ಸಚಿವ ಸ್ಥಾನ ಬಹುತೇಕ ಸಿಗುವುದಿಲ್ಲವೆಂಬುದು ಖಚಿತವಾಗಿದೆ.

ಮೂಲತಃ ಕಾಂಗ್ರೆಸ್‌ನಿಂದ ರಾಜಕೀಯ ಪ್ರವೇಶಿಸಿದರು ವೈಯಕ್ತಿಕ ವರ್ಚಿಸಿನಲ್ಲೇ ತಿಪ್ಪಾರೆಡ್ಡಿ 6 ಬಾರಿ ಶಾಸಕರಾಗಿದ್ದಾರೆ. ಹಿರಿಯೂರು, ಚಳ್ಳಕೆರೆ, ಜಗಳೂರು ವಿಧಾನಸಭಾ ಕ್ಷೇತ್ರದಲ್ಲೂ ಹಿಡಿತ ಸಾಧಿಸಿರುವ ತಿಪ್ಪಾರೆಡ್ಡಿ ಪಕ್ಷದಲ್ಲಿ ಹಿರಿಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಲೋಕಸಭೆ ಹಾಗೂ ವಿಧಾನಸಭೆ, ಸ್ಥಳೀಯ ಸಂಸ್ಥೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಹಿಂದಿನ ಲೆಕ್ಕಚಾರ ತಿಪ್ಪಾರೆಡ್ಡಿ ಅವರ ಪಾತ್ರ ಬಹಳಷ್ಟಿದೆ. ಮಾಜಿ ಸಚಿವ ದಿವಂಗತ ಜಿ.ಎಚ್.ಅಶ್ವತ್‌ರೆಡ್ಡಿ ಅವರ ಸಹೋದರ ಎಂಬುದು ಸಹ ನೆರವಿಗೆ ಬರಲಿದೆ. ಜಿಲ್ಲೆಯಲ್ಲಿ ಕೇವಲ ಒಂದು ಕ್ಷೇತ್ರ ಕೈತಪ್ಪಿರುವ ಬಿಜೆಪಿಗೆ ಭವಿಷ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಸ್ಥಳೀಯತೆ, ಹಿರಿತನದ ಕಾರಣಕ್ಕೆ ಜಿಲ್ಲೆಯ ಚುಕ್ಕಾಣಿ ತಿಪ್ಪಾರೆಡ್ಡಿಗೆ ನೀಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ದಟ್ಟವಾಗಿ ಹಬ್ಬಿದೆ.

ಇನ್ನೂ ಪ್ರಾರಂಭದಿಂದಲೂ ಬಿಎಸ್‌ವೈ ಆಪ್ತ ವಲಯದಲ್ಲಿರುವ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ಕ್ಷೇತ್ರದ ಜನರಲ್ಲಿ ಮನೆಮಾಡಿದೆ.

ಹಿರಿತನ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನಕ್ಕೆ ಒತ್ತಾಯ ಮಾಡುವುದು ಅನಿವಾರ್ಯ. ಈಗ ಕಾಲ ಕೂಡಿ ಬಂದಿರುವುದು ನಿಜಕ್ಕೂ ಸಂತಸ ತಂದಿದೆ. ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲ್ವೆ ಮಾರ್ಗ, ಮೆಡಿಕಲ್ ಕಾಲೇಜ್ ಸ್ಥಾಪನೆ ಸೇರಿ ಅನೇಕ ಯೋಜನೆಗೆ ಮುಕ್ತಿ ನೀಡುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪತ್ರಿಕೆಗೆ ಪ್ರತಿಕ್ರಿಯೆಸಿದರು.

ರಾಜಕೀಯದಲ್ಲಿ ಕ್ಷಣದಿಂದ ಕ್ಷಣಕ್ಕೆ ಬದಲಾವಣೆ ಕಾಣುತ್ತಿದ್ದೇವೆ. ನಾನು ಸಹ ಹಿರಿಯ ಶಾಸಕನಾಗಿದ್ದೇನೆ. ಒಂದೆರಡು ದಿನದಲ್ಲಿ ಸಮ್ಮಿಶ್ರ ಸರ್ಕಾರ ತಾರ್ಕಿಕ ಅಂತ್ಯ ಕಂಡು ರಾಜ್ಯದಲ್ಲಿ ಹೊಸತನ ಶುರುವಾಗಲಿದೆ. ನಂತರ ಸಚಿವ ಸ್ಥಾನ ಯಾರಿಗೆ ಎಂಬ ಪ್ರಶ್ನೇ ಉದ್ಬವಿಸಲಿದೆ. ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

Leave a Reply

Your email address will not be published. Required fields are marked *