
ಚಿತ್ರದುರ್ಗ: ನಗರಸಭೆ ಕೊಡುವ ಗುರುತಿನ ಚೀಟಿಗಾಗಿ ಯಾರಿಗೂ ಹಣ ಕೊಡಬೇಡಿ ಎಂದು ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ಬೀದಿ ಬದಿ ವ್ಯಾಪಾರಿಗಳಿಗೆ ಸಲಹೆ ನೀಡಿದರು.
ನಗರಸಭೆ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಗುರುವಾರ ಬೀದಿ ಬದಿ ವ್ಯಾಪಾರಿಗಳಿಗೆ ಏರ್ಪಡಿಸಿದ್ದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೀದಿ ಬದಿ ವರ್ತಕರಿಗೆ ಗುರುತು ಚೀಟಿ ವಿತರಿಸಲಾಗುತ್ತಿದೆ. ಆದರೆ, ಇದಕ್ಕಾಗಿ ಯಾರೊಬ್ಬರು ಮಧ್ಯವರ್ತಿಗಳಿಗೆ ಹಣ ಕೊಡಬಾರದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಹರಿಸಬೇಕು. ಕೆಲ ವ್ಯಾಪಾರಿಗಳು ಪಾದಚಾರಿ ಹಾಗೂ ವಾಹನ ಸವಾರರಿಗೆ ತೊಂದರೆ ಆಗುವಂತೆ ವ್ಯಾಪಾರ ಮಾಡುತ್ತಿದ್ದಾರೆ.
ಇದು ಸರಿಯಲ್ಲ. ನಿಗದಿತ ಸ್ಥಳದಲ್ಲೇ ವ್ಯವಹರಿಸಬೇಕು. ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ನಿರಂತರ ಸ್ವಚ್ಛತೆಗೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸಬಾರದು ಎಂದರು.
ಕೌಶಲ ಮತ್ತು ಜೀವನೋಪಾಯ ಇಲಾಖೆ ಅಭಿಯಾನ ವ್ಯವಸ್ಥಾಪಕ ಅತೀಕ್ ರೆಹಮಾನ್ ಮಾತನಾಡಿ, ವ್ಯಾಪಾರಿಗಳ ಸಮಿತಿಗೆ 10 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ನಗರದಲ್ಲಿ 909 ಮಂದಿಗೆ ಗುರುತು ಚೀಟಿ ವಿತರಿಸಿದ್ದು, ಬಾಕಿ ವರ್ತಕರಿಗೆ ಶೀಘ್ರ ವಿತರಿಸುವುದಾಗಿ ಹೇಳಿದರು.
ಪರಿಸರ ಇಂಜಿನಿಯರ್ ಜಾಫರ್ ಮಾತನಾಡಿ, ವ್ಯಾಪಾರಸ್ಥರು ಗುಣಮಟ್ಟದ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಬೇಕು. ವಿವಿಧ ಯೋಜನೆಗಳಡಿ ಮಳಿಗಳನ್ನು ನಿರ್ಮಿಸಿಕೊಳ್ಳಬೇಕು ಎಂದರು.
ನಗರಸಭೆ ಕಚೇರಿ ವ್ಯವಸ್ಥಾಪಕಿ ಮಂಜುಳಮ್ಮ, ಕೌಶಲಾಭಿವೃದ್ಧಿ ಕೇಂದ್ರದ ಸಹಾಯಕ ನಿರ್ದೇಶಕ ರವಿ, ಬೀದಿ ಬದಿ ವ್ಯಾಪಾರ ಸಮಿತಿ ಸದಸ್ಯರಾದ ಎನ್.ತಿಪ್ಪೇಸ್ವಾಮಿ, ಮೀನಾಕ್ಷಮ್ಮ, ಮುತ್ತಮ್ಮ, ಮಹದೇವಮ್ಮ ಮತ್ತಿತರರು ಇದ್ದರು.