ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಚಾಲನೆ

ಚಿತ್ರದುರ್ಗ: ಮಕ್ಕಳಿಗೆ ದೇಶಾಭಿಮಾನ, ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಕೆಲಸವನ್ನು ಪಾಲಕರು ಶ್ರದ್ಧೆಯಿಂದ ಮಾಡಬೇಕು ಎಂದು ಹಾವೇರಿಯ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಹೇಳಿದರು.

ನಗರದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನಿಂದ ಆಯೋಜಿಸಿದ್ದ ಶಿಶು ಮಂದಿರದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಓಂ ಬೀಜಾಕ್ಷರ ಮಂತ್ರವನ್ನು ಬರೆಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಮಾನದಲ್ಲಿ ಎಲ್ಲರೂ ಶಿಕ್ಷಣ ಕೊಡಿಸುತ್ತಾರೆ. ಆದರೆ, ಮುಖ್ಯವಾಗಿ ಬೇಕಾದ ಸಂಸ್ಕೃತಿ ಕಲಿಸುವುದನ್ನು ಮರೆತು ಬಿಡುತ್ತಾರೆ. ಇದರಿಂದ ಜೀವನ ಪೂರ್ತಿ ಪಾಲಕರು ನೋವು ಅನುಭವಿಸುತ್ತಾರೆ ಎಂದರು.

ಪ್ರತಿ ತಾಯಿಯೂ ಮಗನ ಭವಿಷ್ಯ ಉಜ್ವಲವಾಗಬೇಕೆಂಬ ಸಂಕಲ್ಪದೊಂದಿಗೆ ಅಕ್ಷರಾಭ್ಯಾಸ ಮಾಡಿಸುತ್ತಾಳೆ. ಇಲ್ಲಿಗೆ ತಮ್ಮ ಕೆಲಸ ಮುಗಿಯಿತು ಎಂದು ಸುಮ್ಮನೆ ಕೂರುವವರೇ ಹೆಚ್ಚು. ಇದರಿಂದ ಹೊರಬರಬೇಕು. ಮೊದಲ ದಿನದಿಂದಲೇ ಸಂಸ್ಕಾರ ಕಲಿಸಿದರೆ ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನಗಳು ಸಂಸ್ಕೃತಿಗೆ ಮಾರಕವಾಗಿ ಪರಿಣಮಿಸಿವೆ. ಮೊಬೈಲ್, ಟಿವಿಯಿಂದ ಮಕ್ಕಳಿಗೆ ಧರ್ಮದರ್ಶನವಾಗುತ್ತಿಲ್ಲ. ಜತೆಗೆ ಹಣದ ಹಿಂದೆ ಬಿದ್ದು ಮಾನವೀಯತೆ, ಸಹಕಾರ ಮನೋಭಾವ ಮರೆತಿದ್ದಾನೆ. ಇನ್ನಾದರೂ ಪಾಲಕರು ಎಚ್ಚೇತ್ತುಕೊಳ್ಳದಿದ್ದರೆ ಭವಿಷ್ಯ ಕರಾಳವಾಗಲಿದೆ ಎಂದು ಎಚ್ಚರಿಸಿದರು.

ಜ್ಞಾನ ಭಾರತಿ ವಿದ್ಯಾ ಮಂದಿರದ ಅಧ್ಯಕ್ಷ ಸಿ.ರಂಗಪ್ಪ ಮಾತನಾಡಿ, ಅಕ್ಷರಾಭ್ಯಾಸವನ್ನು ಕೇವಲ ತೋರ್ಪಡಿಗೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಮನೆಯಲ್ಲಿ ನಿತ್ಯ ದೇವರಲ್ಲಿ ಪ್ರಾರ್ಥಿಸಿ ಅಭ್ಯಾಸ ಮಾಡಬೇಕು ಎಂದರು.
ಶಿಕ್ಷಕರಾದ ಮೃತ್ಯುಂಜಯ ಗುರೂಜಿ, ವಾಣಿಶ್ರೀ ಇತರರು ಉಪಸ್ಥಿತರಿದ್ದರು.

ಮಗುವಿನ ಭವಿಷ್ಯ ಸುಂದರವಾಗಲು ರಾಷ್ಟ್ರೋತ್ಥಾನ ಪರಿಷತ್‌ನಿಂದ ಅಕ್ಷರಾಭ್ಯಾಸ ನಡೆಸಿಕೊಂಡು ಬರಲಾಗುತ್ತಿದೆ. ಮೋಕ್ಷ ಗುಹೆ-ಗುಡಿಗಳಲ್ಲಿರುವುದಿಲ್ಲ. ಸಮಾಜದಲ್ಲಿ ಸತ್ಕಾರ್ಯ ಮಾಡುವುದರ ಮೂಲಕ ಮೋಕ್ಷ ಪಡೆಯಬಹುದಾಗಿದೆ ಎಂದು ಆಡಳಿತ ಮಂಡಳಿ ಸದಸ್ಯ ಡಾ.ಕೆ.ರಾಜೀವಲೋಚನ ತಿಳಿಸಿದರು.

Leave a Reply

Your email address will not be published. Required fields are marked *