ಗೋಡ್ಸೆ ದೇಶಭಕ್ತನೆಂಬ ಹೇಳಿಕೆಗೆ ಕೈ ಆಕ್ರೋಶ

ಚಿತ್ರದುರ್ಗ: ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ದೇಶಭಕ್ತ ಎಂಬ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಡಿಸಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಸಾಧ್ವಿ ಪ್ರಜ್ಞಾಸಿಂಗ್ ಹಾಗೂ ಅವರ ಹೇಳಿಕೆಗೆ ಸಾಥ್ ನೀಡುತ್ತಿರುವ ಸಂಸದರಾದ ಅನಂತಕುಮಾರ್ ಹೆಗಡೆ, ನಳಿನ್‌ಕುಮಾರ್ ಕಟೀಲ್ ಅವರನ್ನು ತಕ್ಷಣ ದೇಶದ್ರೋಹ ಪ್ರಕರಣದಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಮಾತನಾಡಿ, ಸತ್ಯ ಮತ್ತು ಅಹಿಂಸೆ ಅಸ್ತ್ರಗಳೊಂದಿಗೆ ಸ್ವಾತಂತ್ರಕ್ಕಾಗಿ ಹೋರಾಡಿದ ಗಾಂಧಿಯನ್ನು ಗುಂಡಿಕ್ಕಿ ಹತ್ಯೆಗೈದಿರುವ ನಾಥುರಾಮ್ ಗೋಡ್ಸೆ ದೇಶದ್ರೋಹಿ. ಇಂತಹ ವ್ಯಕ್ತಿಯನ್ನು ದೇಶಭಕ್ತ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುವ ಮೂಲಕ ರಾಷ್ಟ್ರಪಿತನಿಗೆ ಅವಮಾನ ಮಾಡಿದ್ದಾರೆ. ಆ ಮೂಲಕ ದೇಶದ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಾದ್ವಿ, ಹೆಗಡೆ ಹಾಗೂ ಕಟೀಲ್ ಕೋಮು ಸೌಹಾರ್ದತೆ ಕದಡುತ್ತಿದ್ದಾರೆ. ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತಲು ಮುಂದಾಗಿದ್ದಾರೆ. ಇವರು ತಮ್ಮ ಹೇಳಿಕೆಗೆ ದೇಶದ ಜನರ ಕ್ಷಮೆಯಾಚಿಸಬೇಕು. ಇಂತಹವರನ್ನು ಸರ್ಕಾರ ತಕ್ಷಣ ಬಂಧಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ಡಿ.ಎನ್.ಮೈಲಾರಪ್ಪ, ಡಿ.ದುರುಗೇಶ್, ಮುಖಂಡರಾದ ಎಲ್.ತಿಪ್ಪೇಸ್ವಾಮಿ, ಮಹಡಿ ಶಿವಮೂರ್ತಿ, ಚಿಕ್ಕಗೊಂಡನಹಳ್ಳಿ ಮಲ್ಲಿಕಾರ್ಜುನ್, ಜಯಪ್ಪ, ಜಾನ್ವಿ ನಾಗರಾಜ್, ಒಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *