ನೊಂದ ಕುಟುಂಬಕ್ಕೆ 80 ಲಕ್ಷ ರೂ.ಪರಿಹಾರ, ಇಬ್ಬರಿಗೆ ಉದ್ಯೋಗ

ಚಿತ್ರದುರ್ಗ: ಲಾರಿ ಡಿಕ್ಕಿ ಹೊಡೆದು ಗರ್ಭಿಣಿ ಸಹಿತ ಮೂವರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಕುಟುಂಬಕ್ಕೆ 80 ಲಕ್ಷ ರೂ.ಪರಿಹಾರ, ಇಬ್ಬರಿಗೆ ಉದ್ಯೋಗ ಹಾಗೂ ಮೃತರ ಅಂತಿಮ ಸಂಸ್ಕಾರಕ್ಕೆ 2 ಲಕ್ಷ ರೂ.ಕೊಡಲು ಅದಿರು ಕಂಪನಿ ಒಪ್ಪಿದೆ.

ಸೋಮವಾರ ಭೀಮಸಮುದ್ರ-ಹಳಿಯೂರು ಮಾರ್ಗದಲ್ಲಿ ಅದಿರು ಲಾರಿ ಡಿಕ್ಕಿ ಹೊಡೆದು ಮಹಾಂತೇಶ್ ನಾಯಕ್, ಆತನ ಪತ್ನಿ ದೀಪಾ ಬಾಯಿ ಹಾಗೂ ದೀಪಾಬಾಯಿ ಸಹೋದರನ ಪುತ್ರ ಚೇತನ್ ಸ್ಥಳದಲ್ಲೇ ಅಸು ನೀಗಿದ್ದರು. ರೊಚ್ಚಿಗೆದ್ದ ಜನ ಮಂಗಳವಾರ ಬೆಳಗ್ಗೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

ಈ ಸಂದರ್ಭ ಜೂನ್ 17 ರೊಳಗೆ 80 ಲಕ್ಷ ರೂ.ಕೊಡುವುದಾಗಿ ಅದಿರು ಕಂಪನಿ ಅಧಿಕಾರಿಗಳು ಡಿಸಿ ಕಚೇರಿಯಲ್ಲಿದ್ದ ಪ್ರಮುಖರಿಗೆ ತಿಳಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನೇತೃತ್ವದಲ್ಲಿ ನಡೆದ ಮಾತುಕತೆಯಲ್ಲಿ ರಾಜ್ಯರೈತ ಸಂಘದ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಹಾಗೂ ಭೀಮಸಮುದ್ರ ಜಿ.ಎಸ್.ಮಂಜುನಾಥ್, ಹಿರೇಗುಂಟನೂರು ಹೋಬಳಿ ಜನಪ್ರತಿನಿಧಿಗಳು, ಗ್ರಾಮಸ್ಥರು, ನೊಂದ ಕುಟುಂಬ ಸದಸ್ಯರಿದ್ದ ಸಭೆ ಒಂದು ಕೋಟಿ ರೂ.ಪರಿಹಾರಕ್ಕೆ ಬೇಡಿಕೆ ಇಟ್ಟಿತು.

ಕಂಪನಿ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಪರಿಹಾರ ನೀಡಲು ಒಪ್ಪಿದ್ದರಿಂದ ಗ್ರಾಮಸ್ಥರು ಚದುರಿದರು.

ತಾಪಂ ಸದಸ್ಯ ಸುರೇಶ್‌ನಾಯಕ್, ರೈತ ಮುಖಂಡರಾದ ಕುರುಬರಹಳ್ಳಿ ಶಿವಣ್ಣ, ಸಿದ್ದಪ್ಪ ನಾರಪ್ಪ, ಜಿಪಂ ಸದಸ್ಯೆ ಜಯಪ್ರತಿಭಾ, ಪ್ರವೀಣ್ ಜಾರ್ಜ್, ತಣಿಗೆಹಳ್ಳಿ, ಡಿ.ಮದಕರಿಪುರ, ಚಿಕ್ಕ ಗುಂಟನೂರು, ಹಿರೇಗುಂಟನೂರು ಹೋಬಳಿ ವ್ಯಾಪ್ತಿ ಗ್ರಾಮಸ್ಥರು, ರಕ್ಷಣಾ ವೇದಿಕೆ ಅಧ್ಯಕ್ಷ ಜಗದೀಶ್ ಸಭೆಯಲ್ಲಿದ್ದರು.

80 ಲಕ್ಷ ರೂ.ಪರಿಹಾರವನ್ನು ನ್ಯಾಯಾಧೀಶರ ಸಮ್ಮುಖ ಕೊಡಿ. ವಿಮೆ ಪರಿಹಾರಕ್ಕೂ ಅಡ್ಡಿ ಆಗಬಾರದೆಂದು ಶಾಸಕ ತಿಪ್ಪಾರೆಡ್ಡಿ ಕಂಪನಿಯವರಿಗೆ ಸೂಚಿಸಿದರು.

ತಕ್ಷಣದಿಂದ ಸಂಚಾರ ನಿಷೇಧ: ಈ ಸಭೆಗೂ ಮೊದಲು ಡಿಸಿ ಆರ್.ವಿನೋತ್ ಪ್ರಿಯಾ ಅಧ್ಯಕ್ಷತೆ, ಶಾಸಕರು, ಅಧಿಕಾರಿಗಳು, ಗ್ರಾಮಸ್ಥರಿದ್ದ ಸಭೆಯಲ್ಲಿ ತಕ್ಷಣದಿಂದ ಭೀಮಸಮುದ್ರ ರಸ್ತೆಯಲ್ಲಿ ಅದಿರು ತುಂಬಿದ ಲಾರಿಗಳ ಸಂಚಾರ ನಿಷೇಧಿಸಲು ನಿರ್ಣಯಿಸಲಾಯಿತು.

ಗಣಿಗಾರಿಕೆಯನ್ನೇ ನಿಷೇಧಿಸಿ ಎಂಬ ಒತ್ತಾಯ, ಬಳ್ಳಾರಿಗೆ ರೈಲ್ವೆ ಮಾರ್ಗದಲ್ಲಿ ಕಳಿಸುವ ರೀತಿಯಲ್ಲೇ ಚಳ್ಳಕೆರೆ ಅಥವಾ ಚಿತ್ರದುರ್ಗ ರೈಲ್ವೆ ನಿಲ್ದಾಣಕ್ಕೆ ಅದಿರು ಸಾಗಿಸಲಿ ಎಂಬ ಸಲಹೆ ಕೇಳಿ ಬಂತು.

ಗ್ರಾಮಸ್ಥರ ಆಗ್ರಹಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಂಬಂಧಿಸಿದ ಗ್ರಾಪಂಗಳು ನಿರ್ಣಯ ಅಂಗೀಕರಿಸಿ ಕಳಿಸಿಕೊಡಿ. ಜಿಪಂ, ತಾಪಂ ಸದಸ್ಯರು ಗಣಿಗಾರಿಕೆ ಬೇಡ ಎಂದು ಲಿಖಿತವಾಗಿ ಕೊಡಿ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರ ಜತೆ ಮಾತನಾಡುತ್ತೇನೆ ಎಂದು ಹೇಳಿದರು.

ನೀವು ಲಿಖಿತವಾಗಿ ಕೊಡದೇ ನಮ್ಮ ಬಳಿ ಜಗಳವಾಡಿದರೆ ಪ್ರಯೋಜನವಿಲ್ಲ ಎಂದು ಎಸ್ಪಿ ಡಾ.ಕೆ.ಅರುಣ್ ಸ್ಪಷ್ಟಪಡಿಸಿದರು. ಗ್ರಾಪಂಗಳಿಂದ ನಡಾವಳಿ ಕಳಿಸಲು ಜನಪ್ರತಿನಿಧಿಗಳು ಒಪ್ಪಿದರು. ಗಣಿ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್ ಕಾಂತರಾಜ್ ಇದ್ದರು.