ಎಲ್ಲ ಮಕ್ಕಳಿಗೂ ಕಡ್ಡಾಯ ಶಿಕ್ಷಣ ದೊರೆಯಲಿ

ಚಿತ್ರದುರ್ಗ: ಲೋಕಸಭೆ ಚುನಾವಣೆಯಲ್ಲಿ ದೇಶಪ್ರೇಮವನ್ನು ಚರ್ಚಾ ವಿಷಯವನ್ನಾಗಿ ರೂಪಿಸಿರುವುದು ನಿಜಕ್ಕೂ ಬೇಸರ ತಂದಿದೆ ಎಂದು ಶಿಕ್ಷಣ ತಜ್ಞ ಡಾ.ನಿರಂಜನ ಆರಾಧ್ಯ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬಾಲ ಕಾರ್ಮಿಕ ಮುಕ್ತ ಕರ್ನಾಟಕ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ದೇಶದಲ್ಲಿ ದೇಶಪ್ರೇಮವನ್ನು ಜನರು ಒಮ್ಮತದಿಂದ ಒಪ್ಪಿಕೊಂಡಿದ್ದಾರೆ. ಆದರೆ ಬಡತನ, ಉದ್ಯೋಗ, ಶಿಕ್ಷಣ ಹಾಗೂ ಮಹಿಳಾ ರಕ್ಷಣೆಯಂತಹ ಅಂಶ ಬದಿಗೊತ್ತಿದ್ದಾರೆ. ವಾಸ್ತವ ಬಿಟ್ಟು ಜನರನ್ನು ದಿಕ್ಕು ತಪ್ಪಿಸಲೆಂದೇ ಭಾವನಾತ್ಮಕ ವಿಷಯಗಳನ್ನೇ ಮುಖ್ಯ ಎಂದು ಬಿಂಬಿಸಲಾಗುತ್ತಿದೆ ಎಂದರು.

ದೇಶಕ್ಕೆ ಸ್ವಾತಂತ್ರೃ ಬಂದು ಎಪ್ಪತ್ತು ವರ್ಷಗಳಾದರೂ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಕುರಿತು ಚರ್ಚೆ ಮಾಡುತ್ತಿದ್ದೇವೆ. ಇಂತಹ ಹೀನಾಯ ಸ್ಥಿತಿ ಯಾವ ದೇಶಕ್ಕೂ ಬರಬಾರದು ಎಂದು ಹೇಳಿದರು.

ಎಲ್ಲ ಮಕ್ಕಳು ಸಮಾನವಾಗಿ ನೆರೆಹೊರೆಯ ಶಾಲೆಯಲ್ಲಿ ಶಿಕ್ಷಣ ಪಡೆದುಕೊಳ್ಳಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಕಾಯ್ದೆ ಅನುಷ್ಠಾನಕ್ಕೆ ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ. ಸಂವಿಧಾನದಡಿ ಎಲ್ಲ ಮಕ್ಕಳಿಗೂ ಕಡ್ಡಾಯ ಶಿಕ್ಷಣ ದೊರೆತಾಗ ಮಾತ್ರ ಈ ಅನಿಷ್ಟ ಪದ್ಧತಿ ನಿರ್ಮೂಲನೆ ಸಾಧ್ಯ ಎಂದರು.

ರಾಷ್ಟ್ರೀಯ ಉತ್ಪನ್ನದಲ್ಲಿ ಶೇ.45 ರಷ್ಟು ಹಣವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಬೇಕು. ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣಕ್ಕೆ ನಿರಂತರವಾಗಿ ಜನಾಂದೋಲನ ನಡೆಯುತ್ತಿದೆ. ಆದರೂ ನಿರೀಕ್ಷೆಗಳನ್ನು ತಲುಪಲು ಇಂದಿಗೂ ಸಾಧ್ಯವಾಗುತ್ತಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ.40 ರಷ್ಟು ಮಕ್ಕಳಿದ್ದಾರೆ. ಆದ್ದರಿಂದ ಬಾಲ ಕಾರ್ಮಿಕ ಪದ್ಧತಿ ಕಡ್ಡಾಯವಾಗಿ ನಿರ್ಮೂಲನೆಯಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೈಶಾಲಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ್, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶೇಷಣ್ಣ, ಡಾ.ನಟರಾಜ್ ಇದ್ದರು.