ಕೋಟೆನಾಡಿನಲ್ಲಿ ಸಂಗೀತ ಲಹರಿ

ಚಿತ್ರದುರ್ಗ: ಲಯ ಲಾವಣ್ಯ ಯುವ ಸಂಗೀತ ತಂಡ ಮಾ.23 ರಂದು ಕೋಟೆನಾಡಿನಲ್ಲಿ ಸಂಗೀತ ಲಹರಿ ಮೊಳಗಿಸಲಿದೆ.

ಬ್ರಾಹ್ಮಣ ಸಂಘದ ಶತಮಾನೋತ್ಸವದ ಅಂಗವಾಗಿ ಅಂದು ಸಂಜೆ 6ಕ್ಕೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಾದ್ಯ ವೈವಿಧ್ಯ ನಡೆಯಲಿದೆ. ಒಂದೇ ವೇದಿಕೆಯಲ್ಲಿ ಏಕಕಾಲಕ್ಕೆ ಎಂಟು ಕಲಾವಿದರು ಜನಪದ, ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಸಂಗೀತದ ಜುಗಲ್‌ಬಂದಿ ನಡೆಸಲಿದ್ದಾರೆ.

ಸಂಗೀತ ವಿದ್ವಾಂಸ ಆನೂರು ಅನಂತ ಕೃಷ್ಣ ಶರ್ಮಾ ಅವರ ಗರಡಿಯಲ್ಲಿ ಪಳಗಿದ ಯುವ ಉತ್ಸಾಹಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಸಂಗೀತ ಅಂದರೆ ಚೌಕಟ್ಟಿನೊಳಗಿನದ್ದಲ್ಲ. ಸ್ವರ ಎಲ್ಲಿಂದ ಹೊಮ್ಮಿತು ಅನ್ನುವುದಕ್ಕಿಂತ ಅದು ಯಾರನ್ನು, ಯಾವಾಗ ಖುಷಿ ಪಡಿಸಿತು ಅನ್ನುವುದಷ್ಟೇ ಮುಖ್ಯ. ಅಂದರೆ ಎಲ್ಲೆಲ್ಲೂ ಸಂಗೀತವಿದೆ. ಅದನ್ನು ಆಸ್ವಾದಿಸುವ ಗುಣ ಬೇಕಷ್ಟೆ. ಪ್ರತಿ ವಸ್ತುವಿನಲ್ಲೂ ಗಾನ ವೈಭವ ಇದೆ ಅನ್ನುವುದನ್ನು ಲಯ ಲಾವಣ್ಯ ತಂಡ ಈಗಾಗಲೇ ಹಲವು ವೇದಿಕೆಗಳಲ್ಲಿ ಸಾಬೀತು ಮಾಡಿದೆ.

ಶಾಸ್ತ್ರೀಯ ಹಾಗೂ ಜಾನಪದ ಸಂಗೀತಕ್ಕೆ ಅನುಗುಣವಾಗಿ ಎಲ್ಲ ಪರಿಕರಗಳನ್ನು ಈ ತಂಡ ಬಳಸಿಕೊಳ್ಳುತ್ತದೆ. ಸಂಗೀತಾ ಎಂದರೆ ಇಂಥದ್ದೇ ಅನ್ನುವ ನಿಗದಿತ ವ್ಯಾಪ್ತಿಗೆ ಇದು ಒಳಪಡುವುದಿಲ್ಲ. ಇಲ್ಲಿನ ಉಪಕರಣ ಹಾಗೂ ಪ್ರಯೋಗ ವಿಶಿಷ್ಟವಾದ್ದರಿಂದ ಸಂಗೀತಾಸಕರನ್ನುಆಕರ್ಷಿಸುತ್ತಿದೆ.

ತಂಡದಲ್ಲಿ: ಶಾದಾಜ್ ಗೊಡ್ಕಿಂಡಿ (ಕೊಳಲು ), ಸುಮಂತ್ ಮಂಜುನಾಥ್ (ವಯೋಲಿನ್), ಎಸ್.ಪಿ. ನಾಗೇಂದ್ರ ಪ್ರಸಾದ್ (ತಾಳವಾದ್ಯ), ಅನೂರ್ ವಿನೋದ್ ಶ್ಯಾಮ್(ತಬಲ ಮತ್ತು ಜಾನಪದ ವಾದ್ಯ), ಸುನಾದ್ ಅನೂರ್(ಖಾನ್ಜಿರಾ ಮತ್ತು ಭದ್ರಾನ್), ಪ್ರಣವ್ ದತ್(ಡ್ರಮ್ಸ್ ), ಅಮೋಘ ವರ್ಷ(ಲ್ಯಾಟಿನ್ ವಾದ್ಯ), ಎಲ್.ಎಸ್. ಸುದಾತ್ (ತಬಲ).