More

    ಭದ್ರೆ ಭೂ ಸ್ವಾಧೀನ ಶೀಘ್ರ ಪೂರ್ಣ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆಗಾಗಿ (90-134 ಕಿ.ಮಿ.) 827 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ರೈತರಿಗೆ ಶೀಘ್ರ ಪರಿಹಾರ ವಿತರಿಸುವುದಾಗಿ ಅಧಿಕಾರಿಗಳು ಹೇಳಿದರು.

    ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ ನೇತೃತ್ವದಲ್ಲಿ ಯೋಜನಾ ವಲಯ ಕಚೇರಿಯಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದರು.

    ವಿಶೇಷ ಭೂ ಸ್ವಾಧೀನ, ಕಂದಾಯ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು, ಸಮಸ್ಯೆಗಳನ್ನು ಬಗೆಹರಿಸಿ ಏಪ್ರಿಲ್ ಒಳಗೆ ಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಳಿಸುವುದಾಗಿ ಹೇಳಿದರು.

    ಭರಮಪುರ, ಪಾಲವ್ವನಹಳ್ಳಿ, ಮರಡಿದೇವಿಗೆರೆ, ಚಿಕ್ಕಸಿದ್ದವ್ವನಹಳ್ಳಿ, ದೊಡ್ಡಸಿದ್ದವ್ವನಹಳ್ಳಿ, ಕುಂಚಿಗನಾಳ್, ದ್ಯಾಮವ್ವನಹಳ್ಳಿ, ಗೋನೂರು, ಕಲ್ಲೇನಹಳ್ಳಿ, ಬೆಳಘಟ್ಟ, ಹಾಯ್ಕಲ್, ಪೇಲೂರುಹಟ್ಟಿ ಹಾಗೂ ಜನ್ನೇನಹಳ್ಳಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಲ ಗ್ರಾಮಗಳಲ್ಲಿ 11 (1) ಅಧಿಸೂಚನೆ ಆಗಿದೆ. ಕೆಲವೆಡೆ 11 (1) ಅಧಿಸೂಚನೆ ಆಗಬೇಕು ಹಾಗೂ ಇನ್ನು ಕೆಲ ಗ್ರಾಮಗಳಲ್ಲಿ ಜೆಎಂಸಿ ಪ್ರಗತಿಯಲ್ಲಿದೆ ಎಂದು ಇಇ ಬಿ.ಎಸ್.ಶ್ರೀಧರ್ ತಿಳಿಸಿದರು.

    ದ್ಯಾಮವ್ವನಹಳ್ಳಿ ವ್ಯಾಪ್ತಿ 33 ಎಕರೆ ಡೀಮ್ಡ್ ಅರಣ್ಯಕ್ಕೆ ಬದಲಿ ಜಮೀನನ್ನು ಇಲಾಖೆಗೆ ಕೊಡಲು ಡಿಸಿ ಅವರನ್ನು ಕೋರಲಾಗಿದೆ ಎಂದರು.

    ಈ ವೇಳೆ ಮಾತನಾಡಿದ ರಘುಮೂರ್ತಿ, ಪಹಣಿ ಸಿಗುತ್ತಿಲ್ಲವೆಂದು ಜನ್ನೇನಹಳ್ಳಿ 7.20 ಎಕರೆ ಜಮೀನು ಸ್ವಾಧೀನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಳೆಂಟು ತಿಂಗಳ ಕಾಲ ಕಡತ ವಿಲೇ ಆಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತಂತೆ ಎಡಿಸಿ ಸಿ.ಸಂಗಪ್ಪಗೆ ಶಾಸಕರು 2 ಬಾರಿ ಕರೆ ಮಾಡಿದರೂ ಅವರು ಸಭೆಗೆ ಬರಲಿಲ್ಲ.

    ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಕುಮಾರಸ್ವಾಮಿ ಇಂದಿನ ಸಭೆಗೂ ಬಂದಿರಲಿಲ್ಲ. ಈ ಕುರಿತಂತೆ ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿ, ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

    ನೀವು ಚಿತ್ರದುರ್ಗದಲ್ಲಿ ತಹಸೀಲ್ದಾರ್ ಆಗಿದ್ದವರು. ಆದರೂ ಯಾಕೋ ನೀವು ದುರ್ಗದಲ್ಲೊಂದು ಕಾಲು, ದಾವಣಗೆರೆಯಲ್ಲಿ ಒಂದು ಕಾಲು ಇಟ್ಟಂಗೆ ಕಾಣುತ್ತದೆ ಎಂದರು.

    ಹಿರಿಯೂರು ತಾಲೂಕು ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ 2.30 ತಿಂಗಳ ಕಾಲಾವಕಾಶ ಕೇಳಿದ ತಹಸೀಲ್ದಾರ್ ಸತ್ಯನಾರಾಯಣ್‌ಗೆ ಯಾಕೆ ಅಷ್ಟೊಂದು ಸಮಯ ಬೇಕು? ಯಾಕೆ ಈ ಅವಧಿಯೊಳಗೆ ವರ್ಗಾ ಆಗುತ್ತೀರಾ ಎಂದು ತಿಪ್ಪಾರೆಡ್ಡಿ ಪ್ರಶ್ನಿಸಿದರು.

    ಆರಂಭದಲ್ಲಿ ರೈತ ಮುಖಂಡರಾದ ಕೊಂಚೆ ಶಿವರುದ್ರಪ್ಪ, ಸುರೇಶಬಾಬು ಬಸ್ತಿಹಳ್ಳಿ ನಡುವೆ ಕ್ಷಣ ಕಾಲ ಮಾತಿನ ಚಕಮಕಿ ನಡೆಯಿತು.

    ಎಇಇಗಳಾದ ರಾಮಚಂದ್ರಪ್ಪ, ಸಿ.ಸೋಮಶೇಖರ್, ರೈತಮುಖಂಡ ಟಿ.ನುಲೇನೂರು ಶಂಕ್ರಪ್ಪ, ಡಾ.ಮಂಜುಳಾ ಸ್ವಾಮಿ ಹಾಗೂ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ತಾಲೂಕಿನ ನಾನಾ ಗ್ರಾಮಗಳ ರೈತರು, ನೋಂದಣಿ, ಡಿಡಿಎಲ್‌ಆರ್, ಎಡಿಎಲ್‌ಆರ್ ಹಾಗೂ ನೋಂದಣಿ ಅಧಿಕಾರಿಗಳು ಇದ್ದರು.

    ಬೆಳೆನಷ್ಟ ಪರಿಹಾರದ ಚೆಕ್ ಬೌನ್ಸ್: ಬೆಳೆ ನಷ್ಟವೆಂದು ಚಿಕ್ಕಸಿದ್ದವ್ವನಹಳ್ಳಿ ರೈತ ವೀರಭದ್ರಪ್ಪಗೆ ಕೊಟ್ಟಿದ್ದ 1.05 ಲಕ್ಷ ರೂ. ಚೆಕ್ ಬೌನ್ಸ್ ಆಗಿದ್ದಕ್ಕೆ ಶಾಸಕರಿಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಅಂಗವಿಕಲ ರೈತನಿಗೆ ಮೋಸವಾಗಿದೆ ಎಂದು ರೈತ ಮುಖಂಡರು ದೂರಿದರು. ಈ ವೇಳೆ ಮತ್ತೊಬ್ಬ ರೈತರು ತಮ್ಮ ಜಮೀನು ಮಧ್ಯೆ ಕಾಲುವೆ ಹಾದು ಹೋಗಿದೆ ಎಂದು ನೋವು ತೊಡಿಕೊಂಡರು.

    ನೀರು ಕಡಿಮೆ ಆಗಬಾರದು: ನೀರಿನ ಪ್ರಮಾಣ ಕಡಿಮೆ ಆದಲ್ಲಿ ಕಾಲುವೆಯ ಕೊನೆ ಪ್ರದೇಶಕ್ಕೆ ನೀರಿಲ್ಲದಂತಾಗುತ್ತದೆ. ಆದ್ದರಿಂದ ಜಿಲ್ಲೆಯ ಯಾವ ತಾಲೂಕಿಗೂ ಮಂಜೂರು ನೀರಿನ ಪ್ರಮಾಣ ಹಾಗೂ ಕೆರೆಗಳ ಸಂಖ್ಯೆಯಲ್ಲಿ ಕಡಿಮೆ ಆಗಬಾರದೆಂದು ಇಬ್ಬರು ಶಾಸಕರು, ಸಿಇ ಶಿವಕುಮಾರ್‌ಗೆ ಸೂಚಿಸಿದರು. ಯಾರ ಒತ್ತಡಕ್ಕೂ ಸಿಲುಕ ಬಾರದು. ಯೋಜನೆಯಡಿ ಕೆರೆಗಳು ಬಿಟ್ಟು ಹೋಗಿದ್ದರೆ ಸೇರಿಸಬೇಕು ಎಂದರು. ಯಾವುದೇ ಕಾರಣಕ್ಕೂ ನೀರಿನ ಪ್ರಮಾಣ ಕಡಿತವಾಗದು ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts