ಚಿತ್ರದುರ್ಗ: ಬಾರ್ ಅ್ಯಂಡ್ ರೆಸ್ಟೋರೆಂಟ್‌ಗಳಲ್ಲೇ ಕೋಟ್ಪಾ ಕಾಯ್ದೆ ಉಲ್ಲಂಘನೆ ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಕೇಸ್ ದಾಖಲಿಸಬೇಕು ಎಂದು ಡಿಸಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ರಾಷ್ಟ್ರೀಯ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಕೆಲವೆಡೆ ಗಾಂಜಾ ಬೆಳೆಯಲಾಗುತ್ತಿದ್ದು, ಈ ಕುರಿತು ಕಠಿಣ ಕ್ರಮಕೈಗೊಳ್ಳಬೇಕು ಎಂದರು.
ತಂಬಾಕು ನಿಯಂತ್ರಣ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಕಾಲ, ಕಾಲಕ್ಕೆ ದಾಳಿ ನಡೆಸಿ ಕಾಯ್ದೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡಬೇಕು. ಗಾಂಜಾ ಬಳಕೆ, ಬೆಳೆಯುವುದು ಅಥವಾ ಮಾರಾಟ ಮಾಡುವುದು ಅಪರಾಧವೆಂದು ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ವಿಭಾಗೀಯ ಸಂಯೋಜಕ ಮಹಾಂತೇಶ್ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ 39 ದಾಳಿ ನಡೆಸಿ, 1241 ಪ್ರಕರಣ ದಾಖಲಿಸಿ 1.02 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದರು.
ಅಬಕಾರಿ ಉಪ ಆಯುಕ್ತೆ ನಿರ್ಮಲಾ, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಸಲಹೆಗಾರ ಪ್ರಭುದೇವ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ, ಜಂಟಿ ಕೃಷಿ ನಿರ್ದೇಶಕ ಸದಾಶಿವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ರಾಜನಾಯಕ್, ಆರೋಗ್ಯ ಇಲಾಖೆಯ ಡಾ.ಜಯಮ್ಮ, ಡಾ.ಸುಧಾ ಮತ್ತಿತರ ಅಧಿಕಾರಿಗಳಿದ್ದರು.