ಕೇಸರಿ ಸಾಗರದಿ ಸಾಗಿದ ಉಮಾತನಯ

ಚಿತ್ರದುರ್ಗ: ಹಿಂದು ಮಹಾಗಣಪತಿ ವಿಸರ್ಜನೆ ಅಂಗವಾಗಿ ಚಿತ್ರದುರ್ಗದಲ್ಲಿ ಶನಿವಾರ ನಡೆದ ಬೃಹತ್ ಶೋಭಾಯಾತ್ರೆ ಜನಮನ ಸೂರೆಗೊಂಡಿತು.

ಪ್ರವಾಹದೋಪಾದಿಯಲ್ಲಿ ಆಗಮಿಸಿದ್ದ ಭಕ್ತರು ಶೋಭಾಯಾತ್ರೆಯ ಅಪೂರ್ವ ಕ್ಷಣಗಳನ್ನು ಸವಿಯುವ ಜತೆಗೆ ಸಂಭ್ರಮದಲ್ಲಿ ಭಾಗಿಯಾದರು.

ಬೆಳಗ್ಗೆ 10 ಕ್ಕೆ ಗಣೇಶನ ಮೆರವಣಿಗೆಯೊಂದಿಗೆ ಶುರುವಾದ ಯಾತ್ರೆ ರಾತ್ರಿ 10 ರವರೆಗೆ ನಿರಂತರ ನಡೆಯಿತು. ಜನರ ಉತ್ಸಾಹ ವಿಸರ್ಜನೆಯವರೆಗೆ ಕಡಿಮೆಯಾಗಿರಲಿಲ್ಲ.

ಕೇಸರಿ ಶಾಲು ಹೊದ್ದ ಯುವಕ, ಯುವತಿಯರು, ಮಹಿಳೆಯರು, ಮಕ್ಕಳು, ಮುದುಕರು ಸೇರಿ ಲಕ್ಷಾಂತರ ಜನರು ಯಾತ್ರೆಯುದ್ದಕ್ಕೂ ಸಾಗಿ ಬಂದರು. ಕುಣಿದು ಕುಪ್ಪಳಿಸಿದರು.

ಸ್ಟೇಡಿಯಂ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಗಣಪನನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲು ಟ್ರಾೃಕ್ಟರ್‌ನಲ್ಲಿ ಕೂರಿಸುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಬಳಿಕ ಬಂಗಾರಲೇಪಿತ ಮಣಿಸರ ಹಾಕಲಾಯಿತು.

ಚೈತನ್ಯ ವೃತ್ತದಲ್ಲಿ ಸ್ವಾಮೀಜಿಗಳು, ವಿಎಚ್‌ಪಿ ಮುಖಂಡರು, ಜನಪ್ರತಿನಿಧಿಗಳು ಪುಷ್ಪಾರ್ಚನೆ ಮಾಡುತ್ತಿದ್ದಂತೆ ಯಾತ್ರೆಗೆ ಚಾಲನೆ ಸಿಕ್ಕಿತು. ಗಣೇಶನ ಪರ ಜೈಕಾರ ಮೊಳಗಿದವು.

ಡಿಜೆಯಿಂದ ಹೊರ ಹೊಮ್ಮತ್ತಿದ್ದ ಸಂಗೀತಕ್ಕೆ ಎಲ್ಲರೂ ಏಕಕಾಲಕ್ಕೆ ಹೆಜ್ಜೆ ಹಾಕಿದ್ದು ವಿಶೇಷ. ಅಣ್ಣಾ ನಿನ್ನ ಹೆಸರು, ಎಣ್ಣೆ ನಮ್ದು.. ಊಟ ನಿಮ್ದು, ಮೇಲು ಕೋಟೆ ಹುಡ್ಗಿ, ಜೈ ಬಜರಂಗಿ, ಮಂದಿರ್ ಬನಾಯೆಂಗೇ ಹಾಡುಗಳು ತೇಲಿ ಬಂದವು. ಯುವತಿಯರು, ಕಾಲೇಜು ಹುಡುಗಿಯರು ತಾವು ಕೂಡ ಯಾರಿಗೂ ಕಮ್ಮಿ ಇಲ್ಲ ಎಂದು ಅವರದೇ ಗುಂಪು ಕಟ್ಟಿಕೊಂಡು ನರ್ತಿಸಿದರು.

ಯುವಕರು ಮುಖದ ಮೇಲೆ ಓಂ ಚಿತ್ರ ಬರೆಯಿಸಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಮಿಂಚಿದರು. ರಾಣಾ ಪ್ರತಾಪ್‌ಸಿಂಹ, ಶಿವಾಜಿ ಸ್ತಬ್ಧಚಿತ್ರದ ಜತೆಗೆ ಓಬವ್ವ, ಮದಕರಿ ನಾಯಕ, ರಾಮ, ಲಕ್ಷ್ಮಣ, ಸೀತೆ, ಹನುಮಂತನ ವೇಷಧಾರಿಗಳು ಗಮನ ಸೆಳೆದರು.

ಜನರು ಮನೆಗಳ ಮಹಡಿ, ಸರ್ಕಾರಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಮರಗಳ ಮೇಲೇರಿ ಯಾತ್ರೆಯ ವೈಭವ ಕಣ್ತುಂಬಿಕೊಂಡರು.

ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ತುಮಕೂರು, ಬಳ್ಳಾರಿ, ಹಾವೇರಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಮಹಾರಾಷ್ಟ್ರ, ಆಂಧ್ರದಿಂದ ಜನರು ಆಗಮಿಸಿದ್ದರು.

ಪ್ರತಿಮೆಗಳ ಜತೆ ಸೆಲ್ಫಿ: ಯಾತ್ರೆಯಲ್ಲಿ ಸೆಲ್ಫಿ ಕ್ರೇಜ್ ಹೆಚ್ಚಿತ್ತು. ವೈದ್ಯ-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಿಂದು ಮಹಾಗಣಪತಿ ಹಾಗೂ ಪ್ರತಿಮೆಗಳ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕೆಲವರು ಯಾತ್ರೆಯನ್ನು ವಿಡಿಯೋ ಮೂಲಕ ಸೆರೆಹಿಡಿದು, ಫೇಸ್‌ಬುಕ್, ವಾಟ್ಸಾಪ್ ಲೈವ್‌ನಲ್ಲಿ ಹರಿಬಿಟ್ಟರು.

ಖಾಕಿ ಕಣ್ಗಾವಲು: ಪೊಲೀಸ್ ಪಹರೆ ನಿಯೋಜಿಸಲಾಗಿತ್ತು. ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗಿತ್ತು. ಕಾವಲು ಗೋಪುರಗಳ ಮೇಲೆ ನಿಂತು ಪೊಲೀಸರು ವಿಡಿಯೋ ಚಿತ್ರೀಕರಿಸಿದರು. ದ್ರೋಣ ಬಳಸಲಾಗಿತ್ತು. ನೂರಾರು ಪೊಲೀಸರು ಮಫ್ತಿಯಲ್ಲಿದ್ದರು. ಸಂಚಾರ ಮಾರ್ಗ ಬದಲಿಸಿದ ಕಾರಣ ಬಸ್‌ಗಳು ಬೈಪಾಸ್ ಮೂಲಕ ಸಂಚರಿಸಿದವು.

ಸ್ಟೆಪ್ ಹಾಕಿದ ಪ್ರತಾಪ್ ಸಿಂಹ: ಶೋಭಾಯಾತ್ರೆಗೆ ಸಂಜೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಮದಕರಿ ನಾಯಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಡಿಜೆ ಸದ್ದಿಗೆ ಸ್ಟೆಪ್ ಹಾಕಿದರು. ಮಾಜಿ ಸಂಸದ ಜನಾರ್ದನ ಸ್ವಾಮಿ ಕೂಡ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.