More

  ಜಾತಿಯಲ್ಲಿ ದಾರ್ಶನಿಕರ ಬಂಧನ ಸಲ್ಲದು

  ಚಿತ್ರದುರ್ಗ: ಮಹಾನ್ ದಾರ್ಶನಿಕರ ಆದರ್ಶಗಳೆಡೆ ಅರಿವು ಮೂಡಿಸಿಕೊಳ್ಳದೇ ಅವರನ್ನು ಜಾತಿಗಳಲ್ಲಿ ಬಂಧಿಸಲಾಗುತ್ತಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಹೇಳಿದರು.

  ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಕೆಲವು ಮಹನೀಯರು ನಿರ್ದಿಷ್ಟ ಜಾತಿಗಳಿಗೆ ಹೈಜಾಕ್ ಆಗಿದ್ದರೆ, ಇನ್ನು ಅನೇಕರನ್ನು ಜಾತಿಗಳಿಗೆ ಸೀಮಿತಗೊಳಿಸಿ, ಅವರ ಎಲ್ಲ ಆದರ್ಶಗಳನ್ನು ಕಡೆಗಣಿಸಲಾಗುತ್ತಿದೆ. ಮಹನೀಯರನ್ನು ಜಾತಿಗಳಿಂದ ಗುರುತಿಸುವುದು ಪೂರ್ಣ ತಪ್ಪೆಂದು ಹೇಳಲಾಗದು, ಇಂತಹ ಮಹನೀಯರು ನಮ್ಮಲ್ಲೂ ಜನ್ಮ ತಾಳಿದ್ದರೆಂಬ ಅಸ್ಮಿತೆಗೆ ಜಾತಿ ನೆರವಾಗುತ್ತದೆ ಎಂದರು.

  ಶಿವಯೋಗಿ ಸಿದ್ಧರಾಮೇಶ್ವರ ಸಹಿತ ಅನೇಕ ಶರಣರು ವಿಶ್ವದಲ್ಲೇ ಶ್ರೇಷ್ಠವೆನ್ನಿಸುವಂಥ ವಚನ ಸಾಹಿತ್ಯದ ಕೊಡುಗೆ ನೀಡಿದರು. ಕುಲ ಮೂಲ ವೃತ್ತಿಗಳನ್ನಾಧರಿಸಿಯೇ ಅನೇಕ ಶರಣರು ವಚನಗಳನ್ನು ರಚಿಸಿದರು. ಲಭ್ಯ 22672 ವಚನಗಳಲ್ಲಿ 1902ಸಿದ್ಧರಾಮರ ರಚನೆ ಗಳಾಗಿವೆ. ಇವರ 72 ಕ್ಕೂ ಹೆಚ್ಚು ಗದ್ದುಗೆಗಳು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿವೆ. ಕೆರೆಕಟ್ಟೆಗಳನ್ನು ಕಟ್ಟಿಸಿದ್ದ ಸಿದ್ದರಾಮರು ಕಾಯಕ ತತ್ವಕ್ಕೆ ಹೆಚ್ಚು ಒತ್ತು ನೀಡಿದ್ದರು. ಕಾಯಕವೇ ಶಿವ ಎಂದು ಸಾರಿದ್ದರೆಂದರು.

  ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಮಾತನಾಡಿ, ಸಾಧನೆ ಸ್ಮರಣೆ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಮಹನೀಯರ ಜಯಂತಿ ಆಚರಿಸಲಾಗುತ್ತದೆ. ಎಲ್ಲ ದಾರ್ಶನಿಕರು ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.

  ಜಿಪಂ ಸಿಇಒ ಸಿ.ಸತ್ಯಭಾಮಾ, ಎಸಿ ವಿ.ಪ್ರಸನ್ನ, ಚಿತ್ರದುರ್ಗ ತಹಸೀಲ್ದಾರ್ ಜೆ.ಸಿ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಜ ಲಿಂಗಪ್ಪ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್.ಲಕ್ಷ್ಮಣ್, ಸಂಘದ ಪದಾಧಿಕಾರಿಗಳು, ಸಮಾಜದ ಪ್ರಮುಖರು ಇದ್ದರು. ಗಣೇಶಯ್ಯ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts