ವೃತ್ತಿಯಲ್ಲಿ ಇರಲಿ ಪ್ರಾಮಾಣಿಕತೆ: ಸಿಟಿಇ ಸಹ ನಿರ್ದೇಶಕ ರೇವಣಸಿದ್ದಪ್ಪ ಸಲಹೆ

ಚಿತ್ರದುರ್ಗ: ವೃತ್ತಿಯಲ್ಲಿ ಪ್ರಾಮಾಣಿಕತೆ ಬೆಳೆಸಿಕೊಂಡಾಗ ಮಾತ್ರ ನ್ಯಾಯ ದೊರಕಿಸಲು ಸಾಧ್ಯ ಎಂದು ಸಿಟಿಇ ಸಹ ನಿರ್ದೇಶಕ ಎಂ.ರೇವಣಸಿದ್ದಪ್ಪ ಹೇಳಿದರು.

ನಗರದ ಡಯಟ್‌ನಲ್ಲಿ ಸರ್ಕಾರಿ ಶಾಲಾ ಆಂಗ್ಲ ಮಾಧ್ಯಮ ಶಿಕ್ಷಕರಿಗೆ ಆಯೋಜಿಸಿದ್ದ ಅಗತ್ಯತೆ ವಿಶ್ಲೇಷಣೆ ಕಾರ್ಯಕ್ರಮ ಉದ್ಘಾಟಿಸಿ, ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ನಿರಂತರ ಬದಲಾವಣೆಗೆ ತಕ್ಕಂತೆ ತರಬೇತಿಗಳು ಅವಶ್ಯ. ಮಕ್ಕಳಿಗೆ ಮೂಲ ಪರಿಕಲ್ಪನೆಗಳನ್ನು ಅರ್ಥವತ್ತಾಗಿ ಕಲಿಸಬೇಕು ಎಂದರು.

ಶಿಕ್ಷಕರು ನಿತ್ಯ ಪಾಠವನ್ನು ಅಭ್ಯಾಸ ಮಾಡಿಕೊಂಡು ಬಂದಾಗ ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳಲು ಅನುಕೂಲವಾಗುತ್ತದೆ. ಕಂಠಪಾಠ ಮಾಡಿಕೊಂಡು ಬಂದರೇ ಯಾರಿಗೂ ಪ್ರಯೋಜನವಿಲ್ಲ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ತರಗತಿ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿರುವುದರಿಂದ ದಾಖಲಾತಿ ಹೆಚ್ಚಾಗಿದೆ. ಶಿಕ್ಷಕರು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಂಗ್ಲೀಷ್ ಬೋಧನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದರು.

ಉಪ ಪ್ರಾಂಶುಪಾಲ ಎನ್.ಎಂ.ರಮೇಶ್ ಮಾತನಾಡಿ, ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಸಾವಿರ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆ ಪ್ರಾರಂಭಿಸಿದ್ದು, ಜಿಲ್ಲೆಯಲ್ಲಿ 23 ಶಾಲೆಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಈ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರಿಗೆ ಅವರ ಬೋಧನೆಗೆ ಅಗತ್ಯತೆ ಪೂರೈಸಲು 15 ದಿನಗಳ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಉಪನ್ಯಾಸಕ ಗಂಗಯ್ಯ ಮಾತನಾಡಿ, ಶಿಕ್ಷಕರು ಯಾವುದೇ ಅಂಜಿಕೆ ಇಲ್ಲದೆ ಆತ್ಮ ವಿಶ್ವಾಸದಿಂದ ಕೆಲಸ ಮಾಡಬೇಕು. ಧನಾತ್ಮಕ ಚಿಂತನೆಯೊಂದಿಗೆ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.

ಉಪನ್ಯಾಸಕರಾದ ಪಿ.ರಾಜಣ್ಣ, ಡಿ.ಆರ್.ಕೃಷ್ಣಮೂರ್ತಿ, ಜಿ.ಎಸ್.ನಾಗರಾಜ್, ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಪಾರ್ವತಿ, ಮಂಜುನಾಥ, ಜಿ.ಜಿ.ನಾಗರಾಜ, ಹೊನ್ನಪ್ಪ, ಶಿಲ್ಪಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *