ದುರ್ಗದಲ್ಲಿ ಅಬ್ಬರಿಸಿದ ಅನ್ನದಾತರು

ಚಿತ್ರದುರ್ಗ: ಸಾಸ್ವೇಹಳ್ಳಿ ಏತ ನೀರಾವರಿ 2ನೇ ಹಂತದ ಯೋಜನೆ ಅನುಮೋದನೆಗೆ ಆಗ್ರಹಿಸಿ ಸೋಮವಾರ ಸಾವಿರಾರು ರೈತರು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದರು.’

ರೈತ ಸಂಘ-ಹಸಿರು ಸೇನೆ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಹಸಿರು ಶಾಲು ಬೀಸುತ್ತಾ ಅನ್ನದಾತರು ಕನಕ ವೃತ್ತದ ಮೂಲಕ ನಗರ ಪ್ರವೇಶಿಸಿದರು. ಶ್ರೀ ಶಿವಮೂರ್ತಿ ಮುರುಘಾ ಶರಣರು ಕನಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆಗೆ ಚಾಲನೆ ನೀಡಿದರು.

ನೀರಿಗಾಗಿ ಹೋರಾಟ, ಹಸಿರೇ ನಮ್ಮ ಬದುಕು, ಹರಿಯಲಿ..ಹರಿಯಲಿ.. ಬರದ ನಾಡಿಗೆ ಭದ್ರೆ ಹರಿಯಲಿ… ನೀರು ಕೊಟ್ಟು ರೈತರ ಉಳಿಸಿ.. ಹೀಗೆ ನಾನಾ ಘೋಷಣೆಗಳು ಮೊಳಗಿದವು. ಹೊಳಲ್ಕೆರೆ ರಸ್ತೆಯಿಂದ ಒನಕೆ ಓಬವ್ವ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿತು.

ಮುಂಗಾರು ಮುನಿಸಿಕೊಂಡಿರುವುದರಿಂದ ತೋಟಗಳ ಒಣಗಿಸಿಕೊಂಡಿರುವ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗಿ ನಿರೀಕ್ಷೆಗೂ ಮೀರಿ 45 ಹಳ್ಳಿಗಳ ರೈತರು ಆಗಮಿಸಿದ್ದರು. ಜತೆಗೆ ನೂರಾರೂ ಟ್ರಾಕ್ಟರ್‌ಗಳಲ್ಲಿ ರೈತ ಮಹಿಳೆಯರು ಬಂದ ಕಾರಣ ಜಿಲ್ಲಾ ಕೇಂದ್ರದ ಸಂಪೂರ್ಣ ಹಸಿರುಮಯವಾಗಿತ್ತು.

ಒಂದೂವರೆ ಗಂಟೆ ಸಾಗಿದ ಪ್ರತಿಭಟನಾ ಮೆರವಣಿಗೆ ಒನಕೆ ಓಬವ್ವ ವೃತ್ತ ತಲುಪುತಿದ್ದಂತೆ ಅನ್ನದಾತರು ಸರ್ಕಾರದ ಮೇಲಿನ ಆಕ್ರೋಶ ಹೊರ ಹಾಕಿದರು. ಶಾಂತ ರೀತಿಯಿಂದ ಹಕ್ಕೋತ್ತಾಯ ಮಾಡಲಾಗುತ್ತಿದೆ. ಇನ್ನೂ ನಮ್ಮ ತಾಳ್ಮೆ ಪರೀಕ್ಷಿಸಿದೆ ಯೋಜನೆಗೆ ಅನುಮೋದನೆ ನೀಡಿ ಎಂದು ಆಗ್ರಹಿಸಿದರು.

ಎಡಿಸಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್‌ಬಾಬು, ಮಂಜಣ್ಣ, ರವಿಕುಮಾರ್, ನಾಗರಾಜ್, ಎಂ.ಬಿ.ತಿಪ್ಪೇಸ್ವಾಮಿ, ಸಿ.ಆರ್.ತಿಮ್ಮಣ್ಣ, ಭೀಮರೆಡ್ಡಿ, ಕುರುಬರಹಳ್ಳಿ ಶಿವಣ್ಣ, ಮುಖಂಡರಾದ ಶ್ರೀರಂಗಯ್ಯ, ಜ್ಯೋತಿಪ್ರಕಾಶ್, ಕೆ.ಜಿ.ಭೀಮಾರೆಡ್ಡಿ, ಕೆ.ಎಸ್.ಶಿವಕುಮಾರ್, ಜಿ.ಎಸ್.ಮಂಜುನಾಥ್, ಜಿ.ಶ್ರೀನಿವಾಸ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸದಸ್ಯೆ ಜಯಪ್ರತಿಭಾ, ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು ಇತರರು ಪಾಲ್ಗೊಂಡಿದ್ದರು.

ಏನಿದು ಸಾಸ್ವೆಹಳ್ಳಿ ಯೋಜನೆ: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಬಳಿ ಈಗಾಗಲೇ ಮೊದಲ ಹಂತದ ಏತ ನೀರಾವರಿ ಯೋಜನೆ ಅನುಷ್ಟಾನಗೊಳಿಸಲಾಗಿದೆ. ಇಲ್ಲಿಂದಲೇ ತುಂಗಭದ್ರದಿಂದ 0.299 ಟಿಎಂಸಿ ಅಡಿ ನೀರನ್ನು ಎತ್ತಿ ಸೂಳೆಕೆರೆಗೆ ಹಾಯಿಸಿ ಡೆಲಿವರಿ ಚೇಂಬರ್ 3ರ ಮೂಲಕ 7.7 ಕಿ.ಮೀ ನಷ್ಟು ರೇಸಿಂಗ್ ಮೇನ್ ಮತ್ತು ಗ್ರಾವಿಟಿ ಮೂಲಕ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲೂಕಿನ 16 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಈ ಕೆರೆಗಳನ್ನು ಅರ್ಧದಷ್ಟು ತುಂಬಿಸಿ ಜನ ಜಾನುವಾರುಗಳಿಗೆ ಕುಡಿವ ನೀರು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶ ಹೊಂದಿದೆ.

ಬಯಲು ಸೀಮೆ ರೈತರು ನಡೆಸುತ್ತಿರುವ ಸಾತ್ವಿಕ ಪ್ರತಿಭಟನೆ ಉಗ್ರ ಸ್ವರೂಪ ಪಡೆದು ಕೊಳ್ಳಬಾರದೆಂದರೆ ಸರ್ಕಾರ ತ್ವರಿತಗತಿಯಲ್ಲಿ ಸಮಸ್ಯೆಗೆ ಸ್ಪಂದಿಸಬೇಕು. ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ಬೇಗ ಪೂರೈಸಿ ನೀರು ಹರಿಸಬೇಕು. ಇಲ್ಲವಾದರೆ ರೈತರು, ಮಠಾಧೀಶರು ಎಲ್ಲರೂ ಒಗ್ಗೂಡಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಎಚ್ಚರಿಸಿದರು.

ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯ ಜನತೆ ಭದ್ರೆಗೆ ಹೋರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಮೈಸೂರು, ಮಂಡ್ಯ ಹಾಗೂ ಉತ್ತರ ಕರ್ನಾಟಕದವರನ್ನು ಮಾತ್ರ ರೈತರೆಂದು ಪರಿಗಣಿಸಿದೆ. ಆದ್ದರಿಂದ ಮಧ್ಯ ಕರ್ನಾಟಕದವರು ಒಗ್ಗಟ್ಟಾಗಿ ರಸ್ತೆಗಿಳಿದರೆ ಸರ್ಕಾರಗಳು ಸ್ಪಂದಿಸುತ್ತವೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಬಯಲು ಸೀಮೆಗೆ ನೀರು ಹರಿಯುವ ತನಕ ನಮ್ಮ ಹೋರಾಟ ನಿರಂತರವಾಗಿರಲಿದೆ. ಸರ್ಕಾರ ಕೂಡಲೇ ಮನವಿ ಸ್ಪಂದಿಸದಿದ್ದರೆ ಮುರುಘಾ ಶರಣರ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಹೊಳಲ್ಕೆರೆ ತಾಲೂಕು ಹೊರಗಿದೆ. ಈಗಾಗಲೇ ತೋಟಗಳು ಒಣಗಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಸಾಸ್ವೇಹಳ್ಳಿ 2ನೇ ಹಂತದ ಯೋಜನೆಗೆ ಒಪ್ಪಿಗೆ ಕೊಡಬೇಕು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ ಹೇಳಿದರು.

ಭದ್ರಾ ಯೋಜನೆ ವಿಳಂಭಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿ ಕೊರೆತೆಯೇ ಮುಖ್ಯ ಕಾರಣ. ಎಲ್ಲ ರೈತರು ಒಂದಾಗಿ ನೀರಿಗೆ ಆಗ್ರಹಿಸಬೇಕು. ಇಲ್ಲವಾದರೆ ನಾವು ನಿರ್ಲಕ್ಷೃಕ್ಕೆ ತುತ್ತಾಗುತ್ತೇವೆ. ಸರ್ಕಾರವೇ ನಮ್ಮ ಬಳಿ ಬರುವ ತನಕ ಹೋರಾಟ ನಡೆಸಬೇಕು ಎಂದು ಹಿರಿಯ ಮುಖಂಡ ಹನುಮಲಿ ಷಣ್ಮುಖಪ್ಪ ತಿಳಿಸಿದರು.

210 ಕೋಟಿ ರೂ. ವೆಚ್ಚದ ಯೋಜನೆಯನ್ನು ಮೊನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆ ತಿರಸ್ಕರಿಸಿರುವುದು ಸರಿಯಲ್ಲ. ಹನಿ ನೀರಿಗೂ ರೈತರು ಕಿಮೀ ದೂರ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. 30 ದಿನದಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ 2ನೇ ಹಂತಕ್ಕೆ ಅನುಮೋದನೆ ನೀಡದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟವಾದಿ ಧರಣಿ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘ ಮುಖಂಡ ನವೀನ್ ಕುಮಾರ್ ಹೇಳಿದರು.

Leave a Reply

Your email address will not be published. Required fields are marked *