ಚಿತ್ರದುರ್ಗ; ಕಳಪೆ ಕಂಪ್ಯೂಟರ್‌ಗಳಿಂದಾಗಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಆರಂಭಿಸಿದ್ದ ಇ-ಆಡಳಿತ ಎರಡೇ ತಿಂಗಳಲ್ಲಿ ಹ್ಯಾಂಗ್ ಆಗಿದೆ.
ಚಿಕ್ಕಮಗಳೂರು ಜಿಪಂ ನಲ್ಲಿ ಇ-ಆಡಳಿತದ ಯಶಸ್ವಿ ಅನುಷ್ಠಾನ ಸ್ಫೂರ್ತಿಯೊಂದಿಗೆ ಚಿತ್ರದುರ್ಗದಲ್ಲೂ ಪೇಪರ್‌ಲೆಸ್ ಆಡಳಿತಕ್ಕೆ ಮುಂದಾಗಿದ್ದ ಸಿಇಒ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ಇ-ಆಫೀಸ್ ಅನುಷ್ಠಾನಕ್ಕೆಂದು 12.70 ಲಕ್ಷ ರೂ. ವೆಚ್ಚದಲ್ಲಿ 15 ಕಂಪ್ಯೂಟರ್, ಪ್ರಿಂಟರ್ಸ್ ಮತ್ತಿತರ ಉಪಕರಣಗಳನ್ನು ಕಿಯೋನಿಕ್ಸ್ ಸಂಸ್ಥೆಯಿಂದ ಖರೀದಿಸಲಾಗಿತ್ತು. ಆದರೆ, ಇವು ಕಳಪೆ ಎಂದು ಸಮಿತಿ ವರದಿ ಆಧರಿಸಿ ಜಿಪಂ ಸಿಇಒ ಸಿ.ಸತ್ಯಭಾಮಾ ಸೂಕ್ತ ಕ್ರಮಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮೊದಲು ಜಿಪಂ, ನಂತರ ಜಿಲ್ಲೆಯ ಆರು ತಾಪಂ ಹಾಗೂ ಆನಂತರದಲ್ಲಿ 189 ಗ್ರಾಪಂಗಳಲ್ಲಿ ಇ-ಆಫೀಸ್ ಆಡಳಿತಕ್ಕೆ ಸಿಇಒ ಉದ್ದೇಶಿಸಿದ್ದರು. ಕಳೆದ ಆಗಸ್ಟ್‌ನಲ್ಲಿಯೇ ಈ ಕಾರ್ಯಕ್ರಮ ಜಾರಿಯಾಗಬೇಕಿತ್ತು. ಇದಕ್ಕಾಗಿ ಜಿಪಂ 73 ನೌಕರರು-ಅಧಿಕಾರಿಗಳಿಗೆ ಅಗತ್ಯ ತರಬೇತಿ ಕೊಡಿಸಲಾಗಿತ್ತು.
ಲ್ಯಾನ್, ನೆಟ್ ಸಂಪರ್ಕ, ಯುಪಿಎಸ್ ವ್ಯವಸ್ಥೆಗಳೊಂದಿಗೆ ಕೊನೆಗೂ ನ.1ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಇ-ಆಫೀಸ್‌ಗೆ ಚಾಲನೆ ನೀಡಿದ್ದರು. ಆದರೆ, ಕಳಪೆ ಉಪಕರಣಗಳಿಂದಾಗಿ ಉದ್ದೇಶಿತ ಕಾರ್ಯಕ್ರಮ ವಿಫಲವಾಗಿದೆ.
ಸಿಪಿಯುಗಳೇ ಕಳಪೆ: ದೋಷಗಳಿಂದ ಕೂಡಿದ ಸಿಪಿಯು, ಜಿನೈನ್ ಅಲ್ಲದ ಒಎಸ್, ಆ್ಯಂಟಿವೈರಸ್ ಅಳವಡಿಸಿದೇ ನಾನಾ ದೋಷಗಳಿಂದ ಕೂಡಿರುವ 15 ಕಂಪ್ಯೂಟರ್‌ಗಳು ಕಳಪೆಯಾಗಿವೆ. ಈ ಹಿನ್ನೆಲೆಯಲ್ಲಿ ಹೊಸ ಕಂಪ್ಯೂಟರ್‌ಗಳನ್ನು ಕೊಡುವಂತೆ ಸೂಚಿಸಬೇಕೆ ಅಥವಾ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಕುರಿತಂತೆ ಗ್ರಾ ಮತ್ತು ಪಂ.ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಿಇಒ ಡಿ.13ರಂದು ಪತ್ರ ಬರೆದಿದ್ದಾರೆ. ಕಂಪ್ಯೂಟರ್ ಖರೀದಿ ವೇಳೆ ಹಾಲಿ ಸಿಪಿಒ ಹಾಗೂ ಹಿಂದಿನ ಸಿಇಒ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆಂದು ಸಿಇಒ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರ ನೇತೃತ್ವದ ಸಮಿತಿ?: ನ.19ರಂದು ಸಿಪಿಒ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚಿಸಲಾಗಿತ್ತು. ಜಿಪಂ ಉಪ ಕಾರ‌್ಯದರ್ಶಿ,ಮುಖ್ಯಲೆಕ್ಕಾಧಿಕಾರಿ,ಜಿಲ್ಲಾ ಯೋಜನಾ ವ್ಯವಸ್ಥಾಪಕ,ಎನ್‌ಐಸಿ ಹಿರಿಯ ತಾಂತ್ರಿಕ ನಿರ್ದೇಶಕ,ಎಸ್‌ಜೆಎಂಐಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯ ರಿಂಗ್ ವಿಭಾಗ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಇ ಆ್ಯಂಡ್ ಸಿ ವಿಭಾಗದ ಎಚ್‌ಒಡಿಗಳು ಸಮಿತಿಯಲ್ಲಿದ್ದಾರೆ.
ದಾಖಲೆಗಳ ಡಿಜಿಟಲೀಕರಣ: ಕಿಯೋನಿಕ್ಸ್ ಸಂಸ್ಥೆ ಪೂರೈಸಿರುವ ಕಂಪ್ಯೂಟರ್‌ಗಳು ಕಳಪೆ ಎಂದು ಗುಣಮಟ್ಟ ಪರಿಶೀಲನಾ ಸಮಿತಿ ವರದಿ ನೀಡಿದೆ. ಈ ಕುರಿತಂತೆ ಈಗಾಗಲೇ ನಾನು ಬರೆದಿರುವ ಪತ್ರಕ್ಕೆ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ.ಅದಕ್ಕಾಗಿ ಉಪ ಕಾರ‌್ಯದರ್ಶಿಯವರನ್ನೇ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಲು ಬೆಂಗಳೂರಿಗೆ ಕಳಿಸುತ್ತಿದ್ದೇನೆ. ಇ-ಆಫೀಸ್ ಜತೆ ಜಿಪಂ, ತಾಪಂ ಕಡತಗಳ ಡಿಜಿಟಲೀಕರಣಕ್ಕೆ ಯೋಜಿಸಲಾಗಿದ್ದು, ಇದಕ್ಕಾಗಿ ಟೆಂಡರ್ ಕರೆಯಲಾಗಿದೆ.