ಹಲ್ಲೆಗೈದ ಕೆಲಸದಾಕೆಗೆ ಜೈಲು ಶಿಕ್ಷೆ

ಚಿತ್ರದುರ್ಗ: ಮನೆ ಕೆಲಸಕ್ಕೆಂದು ಬಂದು, ಮನೆಯೊಡತಿಯ ಕೊಲೆಗೈಯಲು ಯತ್ನಿಸಿದ್ದ ಶೋಭಾಗೆ ನಗರದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷ ಸಜೆ ಹಾಗೂ 16 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

ನಗರದ ದೊಡ್ಡಪೇಟೆ ಮನೆಯೊಂದರಲ್ಲಿ 2018ಅಕ್ಟೋಬರ್ 20ರಂದು ಬೆಳಗ್ಗೆ 8ರ ಸಮಯದಲ್ಲಿ ಮನೆಯೊಡತಿಯ ತಲೆಗೆ ಒನಕೆಯಿಂದ ಹೊಡೆದು, ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣದೊಂದಿಗೆ ಪರಾರಿಗೆ ಪ್ರಯತ್ನಿಸಿದ್ದಳು. ಆದರೆ, ಅದೃಷ್ಟವಶಾತ್ ಗಾಯಗೊಂಡಿದ್ದ ಮನೆಯೊಡತಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಆದರೆ, ಪರಾರಿಗೆ ಯತ್ನಿಸಿದ್ದ ಮಹಿಳೆಯನ್ನು ಅಕ್ಕಪಕ್ಕದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ನಗರಠಾಣೆ ಪಿಐ ಎಂ.ಡಿ.ಫೈಜುಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ ಎಸ್.ಚೇಗರೆಡ್ಡಿ, ಅಪರಾಧಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ಎಂ.ಚಂದ್ರಪ್ಪ ವಾದಿಸಿದ್ದರು.
ಎಟಿಎಂ ಕಾರ್ಡ್ ವಂಚನೆ; ಮೂವರ ಬಂಧನ: ಎಟಿಎಂ ಕಾರ್ಡ್, ಓಟಿಪಿ ನಂಬರ್ ಉಪಯೋಗಿಸಿ ಅತಿಥಿ ಉಪನ್ಯಾಸಕರೊಬ್ಬರ ಖಾತೆಯಿಂದ 14 ಸಾವಿರ ರೂ. ವಂಚಿಸಿದ್ದ ಮೂವರನ್ನು ಚಿತ್ರದುರ್ಗ ಸಿಇಎನ್ ಅಪರಾಧ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿ ನಾಗರತ್ನ ಅವರ ಎಸ್‌ಬಿಐ ಬ್ಯಾಂಕ್ ಖಾತೆಯಿಂದ ಕಳೆದ ಏಪ್ರಿಲ್ 1 ಹಾಗೂ 3ರಂದು 14 ಸಾವಿರ ರೂಪಾಯಿಯನ್ನು ಪೇಟಿಎಂ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದರು.

ಈ ಕುರಿತಂತೆ ಚಿತ್ರದುರ್ಗ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಪಿಐ ಮೃತ್ಯುಂಜಯ ಮತ್ತವರ ಸಿಬ್ಬಂದಿ ಕೆ.ಸಿ.ನಿಖಿಲ್, ದಾವಣಗೆರೆ ಮತ್ತು ಚಿತ್ರದುರ್ಗ ಇಬ್ಬರು ವಿದ್ಯಾರ್ಥಿನಿಯರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವೃದ್ಧೆಯಿಂದ ಚಿನ್ನದ ಸರ ಅಪಹರಣ: ಚಿತ್ರದುರ್ಗ ನಗರದ ಧರ್ಮಶಾಲಾ ರಸ್ತೆಯಲ್ಲಿ ವೃದ್ಧೆಯೊಬ್ಬರಿಂದ ದುಷ್ಕರ್ಮಿಯೊಬ್ಬ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಎಂ.ಜಿ.ಸರ್ಕಲ್ ಕಡೆಯಿಂದ ತಮ್ಮ ಮನೆಗೆ ಹೋಗುತ್ತಿದ್ದ ಲಕ್ಷ್ಮೀ ಎಂಬುವರಿಂದ ಅಂದಾಜು 70 ಗ್ರಾಂ ತೂಕದ 1.80 ಲಕ್ಷ ರೂ. ಮೌಲ್ಯದ ಎರಡು ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *