ಸಂಸಾರದ ಆಳಕ್ಕೆ ಪಾತಾಳಗರಡಿ ಹಾಕಿದ ಹರಟೆ

ಚಿತ್ರದುರ್ಗ: ಸಂಸಾರದಲ್ಲಿ ಹೆಣ್ಣು ಮೇಲೋ ಗಂಡು ಮೇಲೋ ಎಂಬುದು ಸದಾ ಚರ್ಚೆಯಲ್ಲಿರುವ ವಿಷಯವೇ! ಅದನ್ನೇ ಸ್ವಲ್ಪ ಸುಧಾರಿಸಿ, ಸಂಸಾರದಲ್ಲಿ ಸಂಸ್ಕಾರ ನೀಡುವುದು ಹೆಣ್ಣೋ ಗಂಡೋ ಎಂಬ ವಿಷಯದ ಹರಟೆಗೆ ನಗರದ ಗಾಯತ್ರಿ ಕಲ್ಯಾಣ ಮಂಟಪ ವೇದಿಕೆಯಾಗಿತ್ತು. ಎಂದಿನಂತೆ ಹರಟೆಯ ಸೂತ್ರ ಹಿಡಿದು ಕುಳಿತವರು ಕಣ್ಣನ್ ಮಾಮಾ ಎಂದೇ ಕರೆಸಿಕೊಳ್ಳುವ ಹಿರೇಮಗಳೂರು ಕಣ್ಣನ್.

ವಾದ ಮಂಡನೆಗೆ ಕುಳಿತವರು ನಾಲ್ವರು ಮೇಧಾವಿಗಳು. ವಾದ- ಪ್ರತಿವಾದ ಆಲಿಸಿ, ಆಸ್ವಾದಿಸಲು ತೆರೆದುಕೊಂಡಿದ್ದವು ಸಾವಿರಾರು ಕಿವಿಗಳು. ಸ್ತ್ರೀ ಪುರುಷ ಬಣಗಳು ತಂತಮ್ಮ ವಾದ ಮಂಡಿಸಿದಾಗಲೆಲ್ಲ ಚಪ್ಪಾಳೆಯ ಸುರಿಮಳೆ. ಕಣ್ಣನ್ ಮಾತಿನ ವಗ್ಗರಣೆಗೆ ನಗೆಯ ಹೊನಲು. ಏಳು ಗಂಟೆಗೆ ಕುಳಿತ ಜನ ಕಾರ್ಯಕ್ರಮ ಮುಗಿಯುವವರೆಗೂ ಅಲ್ಲಾಡಲಿಲ್ಲ.

ನಾನು ಬಡವಿ, ಆತ ಬಡವ ಒಲವೇ ನಮ್ಮ ಬದುಕು ಎನ್ನುವ ಮೂಲಕ ಸಂಸಾರಕ್ಕೆ ಇಬ್ಬರೂ ಅನಿವಾರ್ಯ ಎಂಬ ಮಾತಿನೊಂದಿಗೆ ಹರಟೆಗೆ ಚಾಲನೆ ನೀಡಿದರು.

ಉಪನ್ಯಾಸಕಿ ಜಯಾ ಪ್ರಾಣೇಶ, ಸಂಸಾರ ಮಾಡಲು ಸಂಸ್ಕಾರ ಬೇಕು, ಅದರಲ್ಲಿ ಹೆಣ್ಣಿನ ಪಾತ್ರ ಪ್ರಮುಖ ಎನ್ನುತ್ತ ಜಿ.ಎಸ್. ಎಸ್ ಅವರ ಸ್ತ್ರೀ ಎಂದರೆ ಅಷ್ಟೇ ಸಾಕೇ ಎಂಬ ಪದ್ಯವನ್ನು ಉದಾಹರಿಸಿದರು. ನಂತರ ಡಿವಿಜಿ, ಬೇಂದ್ರೆಯವರ ಕವನಗಳಲ್ಲದೇ ಜನಪದ ಹಾಡುಗಳು ಅವರ ಪ್ರತಿಪಾದನೆಯಲ್ಲಿ ಮೂಡಿ ಬಂದವು.

ಇದಕ್ಕೆ ಪ್ರತ್ಯುತ್ತರವಾಗಿ ಉಪನ್ಯಾಸಕ ನವೀನ ಮಾತನಾಡಿ, ಸಂಸ್ಕಾರ ಹೇಳಿಕೊಡುವುದು ಗಂಡಿನದೇ ಜವಾಬ್ದಾರಿ ಎಂದರು. ವಿದ್ಯೆ ಕಲಿಸುವಾಗ ಕಠೋರನಾಗಬೇಕಾಗುತ್ತದೆ. ಆದರೆ ತಂದೆ ಎಂದಾಗ ಎಲ್ಲರಿಗೂ ಕಟುತನವೇ ಕಾಣುತ್ತದೆಯೇ ಹೊರತು ಅದರ ಹಿಂದಿನ ಪರಿಶ್ರಮ ಕಾಣದು ಎಂದು ಹಲವು ಉದಾಹರಣೆಗಳನ್ನು ತೆರೆದಿಟ್ಟರು.

ಇದಕ್ಕೆ ಸಂಸ್ಕಾರ ಭಾರತೀಯ ರಾಜ್ಯ ಕಾರ್ಯದರ್ಶಿ ರೇಖಾ ಪ್ರೇಮ್‌ಕುಮಾರ್ ಪ್ರತಿಕ್ರಿಯೆ ನೀಡಿ, ತಂದೆ ತಾಯಿಯರಲ್ಲಿ ಮಕ್ಕಳು ಅಮ್ಮನನ್ನೇ ಹೆಚ್ಚಾಗಿ ಇಷ್ಟ ಪಡುತ್ತಾರೆ ಎಂದರು. ಬ್ರಹ್ಮ ವಿಷ್ಣು ಮಹೇಶ್ವರರನ್ನು ಮಕ್ಕಳಾಗಿ ಮಾಡಿಕೊಂಡ ಅನುಸೂಯೆಯ ಕತೆ ಹೇಳಿ, ಸ್ತ್ರೀಯ ಮಹತ್ವನ್ನು ಎತ್ತಿ ಹಿಡಿದರು. ಅನೇಕ ತೊಂದರೆ ಅನುಭವಿಸಿದರೂ ಸೀತೆ, ದ್ರೌಪದಿ, ಕುಂತಿಯ ತೋರಿದ ಔದಾರ್ಯವನ್ನು ಬಿಡಿಸಿಟ್ಟರು.

ಆತ್ಮೀಯ ಪುರುಷರೇ ಎಂದೇ ಮಾತು ಆರಂಭಿಸಿದ ಉಪನ್ಯಾಸಕ ಗುರುಮೂರ್ತಿ, ಪುರುಷರ ಧ್ವನಿಗೆ ತಾವು ಧ್ವನಿಯಾಗುವುದಾಗಿ ಹೇಳಿದರು. ಎಷ್ಟೇ ಆದ್ರೂ ಗಂಡಸೇ ಮೇಲ್. ಇಂಗ್ಲಿಷ್‌ನಲ್ಲಿ ಗಂಡಿಗೆ ಮೇಲ್ ಅನ್ನುತ್ತಾರಾದ್ದರಿಂದ ಹೆಂಗಸರು ಎಂದಿಗೂ ಮೇಲ್ ಆಗಲಾರರೆಂದು ಚಟಾಕಿ ಹಾರಿಸಿದರು. ಅಂಕಲ್, ಆಂಟಿ ಮಧ್ಯೆ ನಮ್ಮ ಸಂಸ್ಕೃತಿ ಕಳೆದು ಹೋಗಿದೆ ಎಂದರು.

ಬ್ರಾಹ್ಮಣ ಸಂಘದ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಹರಟೆ ಕಾರ್ಯಕ್ರಮದಲ್ಲಿ ಪ್ರಸ್ತುತ ವಿಷಯಗಳಾದ ಮೀಟೂ, ಅಯ್ಯಪ್ಪ ದೇಗುಲಕ್ಕೆ ಸ್ತ್ರೀಯರ ಪ್ರವೇಶ, ಅನೈತಿಕ ಸಂಬಂಧ ಕುರಿತು ಸುಪ್ರೀಂ ತೀರ್ಪುಗಳು ಪ್ರಾಸಂಗಿಕವಾಗಿ ಪ್ರಸ್ತಾಪವಾಗಿ ನಗು ಉಕ್ಕಿಸಿದವು.

ಕಣ್ಣನ್ ಮಾಮನ ಮಾತಿನ ಝಲಕ್

  • ಗಂಡ ಹೆಂಡತಿಯನ್ನು ಆಕಿ ಅನ್ನುತ್ತಾನೆ. ಅಂದರೆ ಆ ಕೀ ಎಂದರ್ಥ. ಆ ಕೀ ಇದ್ದರೇನೇ ಸಂಸಾರದ ಖಜಾನೆ ತೆರೆಯುವುದು.
  • ಒಂದು ಹುಲಿ, ಒಂದು ಇಲಿ ಸೇರಿದರೆ ಫ್ಯಾಮಿಲಿ. ಮನೆಯಲ್ಲಿರುವುದು ಹುಲಿ, ಹೊರಗಿನಿಂದ ಬರುವುದು ಇಲಿ!
  • ಮನೆಯಲ್ಲಿ ಹೆಂಡತಿಯೇ ಸುಪ್ರೀಂ ಕೋರ್ಟ್. ಅದನ್ನು ಪ್ರಶ್ನಿಸುವ ಅಧಿಕಾರ ಗಂಡನೆಂಬ ಹೈಕೋರ್ಟ್‌ಗಿಲ್ಲ.

 

One Reply to “ಸಂಸಾರದ ಆಳಕ್ಕೆ ಪಾತಾಳಗರಡಿ ಹಾಕಿದ ಹರಟೆ”

  1. ಇಬ್ಬರಲ್ಲಿ ಒಬ್ಬರಿಲ್ಲದಿದ್ದರೂ ಅನಾನುಕೂಲ ಖಂಡಿತ. ಗಂಡನ್ನು ಹೆಣ್ಣು ಸನ್ಯಾಸಿಯಾಗಲು ಬಿಡದೇ ಸಂಸಾರಿ ಮಾಡಿಬಿಡುವಳು. ಇದೇ ಸರಿ.

Comments are closed.