ಹಸರೀಕರಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧ

ಚಿತ್ರದುರ್ಗ: ನಗರದ ಅಭಿವೃದ್ಧಿ ದೃಷ್ಟಿಯಿಂದ ವರ್ಷದಿಂದ ಸಿಸಿ ರಸ್ತೆ, ಮಳೆ ನೀರು ಚರಂಡಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿವೆ. ಆದರೆ, ರಸ್ತೆ ವಿಸ್ತರಣೆಯಿಂದ ನೂರಾರು ವರ್ಷದ ಮರಗಳು ಧರೆಗುರುಳಿದವು.

ಮರಗಳನ್ನು ಕಡಿಯದೇ ರಸ್ತೆ ಅಭಿವೃದ್ಧಿಗೊಳಿಸಿ ಎಂಬ ಪರಿಸರ ಪ್ರೇಮಿಗಳ ಕೂಗಿನ ನಡುವೆಯೇ ಕಲಾ ಕಾಲೇಜು, ಒನಕೆ ಓಬವ್ವ ವೃತ್ತದಲ್ಲಿ ಮೂವತ್ತಕ್ಕೂ ಹೆಚ್ಚು ವೃಕ್ಷಗಳಿಗೆ ಕೊಡಲಿ ಪೆಟ್ಟು ಬಿದ್ದಿತು. ಈ ನಡುವೆ ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರದವರೆಗಿನ ಮುಖ್ಯ ರಸ್ತೆ ಅಭಿವೃದ್ಧಿಗೆ 165 ಮರಗಳನ್ನು ನೆಲಕ್ಕೆ ಉರುಳಿಸಲಾಯಿತು.

ಬೇಸಿಗೆ ಪ್ರಾರಂಭದಲ್ಲಿ ಅಷ್ಟಾಗಿ ಕಾಣದ ಬಿಸಿಲ ಝಳ ದಿನ ಕಳೆದಂತೆ ಹೆಚ್ಚಾಗಿದೆ. ಈ ಪರಿಣಾಮ ಜನರಿಂದ ಗಿಜಿಗುಡುತ್ತಿದ್ದ ಪ್ರವಾಸಿ ಮಂದಿರದ ರಸ್ತೆ, ಗಾಯತ್ರಿ ಕಲ್ಯಾಣ ಮಂಟಪ, ವಾಸವಿ ವೃತ್ತ ಬಣಗುಡುತ್ತಿವೆ. ಎಲ್ಲವನ್ನೂ ಗಮನಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಗರ ಹಸಿರೀಕರಣಕ್ಕೆ ಮಾಸ್ಟರ್ ಫ್ಲಾನ್ ಸಿದ್ಧಗೊಳಿಸಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಅರಣ್ಯ ಇಲಾಖೆ, ಸಂಘ ಸಂಸ್ಥೆ, ಬಡಾವಣೆ ನಿವಾಸಿಗಳ ಸಭೆ ಕರೆದು ಚರ್ಚೆ ನಡೆಸಲು ಶಾಸಕರು ನಿರ್ಧರಿಸಿದ್ದಾರೆ. ವಾತಾವರಣ ತಂಪಾಗಲು ಯಾವ ಮರಗಳನ್ನು ಎಲ್ಲಿ, ಎಷ್ಟು ನೆಡಬೇಕು ಎಂದು ತಜ್ಞರಿಂದ ಸಲಹೆ ಪಡೆದು ಎಲ್ಲರ ಸಹಕಾರದೊಂದಿಗೆ ಚಿತ್ರದುರ್ಗದ ಹಸಿರೀಕರಣಕ್ಕೆ ಚಾಲನೆ ನೀಡಲಿದ್ದಾರೆ.

ರಸ್ತೆ ಕಾಮಗಾರಿಗೂ ಮುನ್ನ ಸಿದ್ಧರಾಜು ಜೋಗಿ ನೇತೃತ್ವದ ತಂಡ 2017ರ ಜನವರಿಯಲ್ಲಿ ಟಾರ್ಗೆಟ್ ಟೆನ್ ತೌಸೆಂಡ್ ಅಭಿಯಾನಕ್ಕೆ ಚಾಲನೆ ನೀಡಿತ್ತು. ಸತತ ಬರದಿಂದ ಭೂಮಿ ಬರಡಾಗಿದ್ದರಿಂದ ಆರಂಭದಲ್ಲಿ ಗಿಡ ನೆಡುವ ಜತೆಗೆ ಅವುಗಳ ರಕ್ಷಣೆ ಹೊಣೆಯು ತಂಡದ ಮೇಲೆ ಬಿದ್ದಿತು. ಒಂದು ಗಿಡವೂ ಸಾಯಬಾರದೆಂದು ಪಣತೊಟ್ಟು ಟ್ಯಾಂಕರ್ ಮೂಲಕ ನೀರುಣಿಸಿ ರಕ್ಷಿಸಿದ್ದರು. ಮಲ್ಲಾಪುರ, ನೆಹರು ನಗರ, ದವಳಗಿರಿ ಬಡಾವಣೆಯಲ್ಲಿ ಸಾವಿರಕ್ಕೂ ಹೆಚ್ಚು ಗಿಡ ನೆಟ್ಟಿದ್ದಾರೆ.

ಅರಣ್ಯ ಇಲಾಖೆ ಈಗಾಗಲೇ ನೆಡುತೋಪುಗಳಲ್ಲಿ ವಿವಿಧ ಜಾತಿಯ ಲಕ್ಷಾಂತರ ಸಸಿಗಳನ್ನು ಬೆಳೆಸುತ್ತಿದೆ. ಸಮಾಜದ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪೋಷಿಸಿದರೆ ಅಭಿವೃದ್ಧಿ ಜತೆ ಪರಿಸರ ಸಂರಕ್ಷಣೆ ಆಗಲಿದೆ.