ಹಾರ್ನ್ ಬಾರಿಸಿದ್ದಕ್ಕೆ ಚಾಲಕನ ಮೇಲೆ ಹಲ್ಲೆ

ಚಿತ್ರದುರ್ಗ: ನಗರದ ಗಾಂಧಿ ಸರ್ಕಲ್ ಬಳಿ ಗುರುವಾರ ಶವಯಾತ್ರೆ ಸಾಗುತ್ತಿದ್ದ ವೇಳೆ ಹಾರ್ನ್ ಮಾಡಿದ ಕಾರಣಕ್ಕೆ ಗುಂಪೊಂದು ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದೆ.

ಬೆಳಗ್ಗೆ 11.30ರ ಹೊತ್ತಿಗೆ ಶವಯಾತ್ರೆ ಸಾಗುತ್ತಿದ್ದಾಗ ಉಂಟಾದ ಮಾತಿನ ಚಕಮಕಿ ಹಲ್ಲೆಗೆ ತಿರುಗಿದೆ. ಗಾಯಗೊಂಡಿರುವ ಚಾಲಕ ನಾಯಕನಹಟ್ಟಿ ರಾಕೇಶನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದರಿಂದ ಖಾಸಗಿ ಬಸ್ ನಿಲ್ದಾಣ, ಗಾಂಧಿ ವೃತ್ತ, ಮೆದೇಹಳ್ಳಿ ರಸ್ತೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಘಟನೆಗೆ ಸಂಬಂಧಿಸಿದಂತೆ ನಗರ ಹಾಗೂ ಕೋಟೆ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ. ಹಲ್ಲೆ ನಡೆಸಿದ ವ್ಯಕ್ತಿಗಳು ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ನಡೆಸುತ್ತಿದ್ದ 20ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರನ್ನು ವಶಕ್ಕೆ ಪಡೆಯಲಾಗಿದೆ.

ಪ್ರತಿಭಟನಾಕರರನ್ನು ಚದುರಿಸಿದ ಪೊಲೀಸರು: ಸಿಬ್ಬಂದಿ ಮೇಲೆ ಹಲ್ಲೆ ನಡೆದರೂ ಸ್ಥಳಕ್ಕೆ ಬಾರದ ಬಸ್ ಮಾಲೀಕರ ನಡೆಯಿಂದ ಕೆರಳಿದ ಚಾಲಕ, ನಿರ್ವಾಹಕರು ಸೇವೆ ಸ್ಥಗಿತಗೊಳಿಸಿ ನಿಲ್ದಾಣದ ಬಳಿ ಮುಷ್ಕರ ನಡೆಸಿದ್ದರಿಂದ ಖಾಸಗಿ ಬಸ್ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು.

ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಚಾಲಕರು, ನಿರ್ವಾಹಕರು, ಮತ್ತೆ ಗಾಂಧಿ ವೃತ್ತದಲ್ಲಿ ಸಂಜೆ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಗುಂಪನ್ನು ಚದುರಿಸಿ, ಹಲವರನ್ನು ವಶಕ್ಕೆ ಪಡೆದರು.
ಬಂದೋಬಸ್ತ್: ಖಾಸಗಿ ಬಸ್ ನಿಲ್ದಾಣ ಬಳಿ ಡಿಎಆರ್ ತುಕಡಿ ನಿಯೋಜಿಸಲಾಗಿದೆ. ಗಾಂಧಿ ವೃತ್ತದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಗಲಾಟೆ ದೃಶ್ಯ ಸೆರೆಯಾಗಿದೆ. ಇದರ ಆಧಾರದ ಮೇರೆಗೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *