ಶರಣರ ನಡೆ ಕೋಟೆ ಸಂರಕ್ಷಣೆ ಕಡೆ

ಚಿತ್ರದುರ್ಗ: ಚಿತ್ರದುರ್ಗದ ಏಳುಸುತ್ತಿನ ಕೋಟೆಯನ್ನು ಸಂರಕ್ಷಿಸುವ ಜತೆಗೆ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಬುಧವಾರ ನಮ್ಮ ನಡಿಗೆ ಕೋಟೆ ಸಂರಕ್ಷಣೆ ಕಡೆಗೆ ಜಾಗೃತಿ ಜಾಥಾ ನಡೆಯಿತು.

ನೂರಾರು ಸಾರ್ವಜನಿಕರು, ಗಣ್ಯರೊಂದಿಗೆ ಬೆಳಗ್ಗೆ 7.15ಕ್ಕೆ ಜಾಥಾ ಹೊರಟ ಶರಣರು, ಐತಿಹಾಸಿಕ ಕೋಟೆಯ ವಿವಿಧ ಸ್ಥಳಗಳಿಗೆ ತೆರಳಿ ಶಿಥಿಲಾವಸ್ಥೆಯಲ್ಲಿರುವ ಗೋಡೆ, ಸ್ಮಾರಕಗಳನ್ನು ವೀಕ್ಷಿಸಿದರು. ದುರಸ್ತಿ ಹಾಗೂ ಸ್ವಚ್ಛತೆಗೆ ಪ್ರತಿಪಾದಿಸಿದರು.

ಈ ವೇಳೆ ಶರಣರು ಬಿಚ್ಚುಗತ್ತಿ ಭರಮಣ್ಣ ನಾಯಕರ ಸಮಾಧಿಗೆ ಗೌರವ ಸಲ್ಲಿಸಿದರು. ಇದೇ ವೇಳೆ ಕೋಟೆ ಆವರಣದ ಹಳೆಯ ಮುರುಘಾ ಮಠಕ್ಕೂ ಭೇಟಿ ಕೊಟ್ಟರು.

ಇತಿಹಾಸ ಉಳಿಸಿ-ಐತಿಹಾಸಿಕ ಸ್ಮಾರಕ ರಕ್ಷಿಸಿ, ಈಗ ಕೋಟೆ ಕಟ್ಟಲು ಸಾಧ್ಯವಿಲ್ಲ. ಕಟ್ಟಿರುವ ಕೋಟೆ ರಕ್ಷಿಸೋಣ, ಇತಿಹಾಸದ ಅವಜ್ಞೆ ಬೇಡ, ಇತಿಹಾಸ ತಿಳಿಯಿರಿ,ಇತಿಹಾಸ ಸಂರಕ್ಷಿಸಿ ಎಂಬಿತ್ಯಾದಿ ಬರಹಗಳ ನಾಮಫಲಕ ಹಿಡಿದು ಜಾಥಾದಲ್ಲಿ ಘೋಷಣೆ ಕೂಗಲಾಯಿತು.
ತಿಪಟೂರಿನ ಶ್ರೀ ರುದ್ರಮುನಿ ಸ್ವಾಮೀಜಿ, ವಿವಿಧ ಸಂಘಟನೆ ಮುಖಂಡರಾದ ಆರ್.ಶೇಷಣ್ಣಕುಮಾರ್, ಕೆಇಬಿ ಷಣ್ಮುಖಪ್ಪ, ಆನಂದಪ್ಪ, ಮಲ್ಲಿಕಾರ್ಜುನ್, ಪೈಲ್ವಾನ್ ತಿಪ್ಪೇಸ್ವಾಮಿ, ಮಠದ ಆಡಳಿತಾಧಿಕಾರಿಗಳಾದ ಎ.ಜೆ.ಪರಮಶಿವಯ್ಯ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಡಾ.ಈ.ಚಿತ್ರಶೇಖರ್, ಎಂ.ಜಿ.ದೊರೆಸ್ವಾಮಿ, ಎನ್.ತಿಪ್ಪಣ್ಣ ಇದ್ದರು.

Leave a Reply

Your email address will not be published. Required fields are marked *