ಕೊಳವೆಬಾವಿಗೆ ಬಿದ್ದ ಜಿಪಂ ಸಾಮಾನ್ಯ ಸಭೆ!

ಚಿತ್ರದುರ್ಗ: ಸತತ 8 ತಿಂಗಳ ಬಳಿಕ ಗುರುವಾರ ನಡೆದ 6ನೇ ಹಾಗೂ ಜಿಪಂ ಹೊಸ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಅಧ್ಯಕ್ಷತೆಯ ಮೊದಲ ಸಭೆ ಬಹುತೇಕ ಸಮಯವನ್ನು ಕೊಳವೆ ಬಾವಿಗಳ ಬಿಲ್ ಪಾವತಿ ವಿಷಯ ನುಂಗಿ ಹಾಕಿತು.

ಸಭೆ ಸೇರುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸದಸ್ಯರು, ಕ್ರಿಯಾಯೋಜನೆ ಹೊರತಾಗಿ ಕೊರೆದಿರುವ ಕೊಳವೆ ಬಾವಿಗಳಿಗೆ ಅಂದಾಜು 10 ಕೋಟಿ ರೂ. ಪಾವತಿಸ ಬೇಕಿದೆ. ಒಂದು ವೇಳೆ ನಿಯಮಾನುಸಾರ ಕೊಳವೆ ಬಾವಿ ಕೊರೆಸಿಲ್ಲ ಎಂದಾದರೆ ಅಧಿಕಾರಿಗಳನ್ನು ಅಮಾನತು ಪಡಿಸುವಂತೆ ಆರ್.ಕೃಷ್ಣಮೂರ್ತಿ ಪಟ್ಟು ಹಿಡಿದರು.

3 ವರ್ಷಗಳಿಂದ ನಮ್ಮ ತಾಲೂಕಿನ ಜಿಪಂ ಸದಸ್ಯರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಹಿರಿಯೂರು ಸದಸ್ಯರು ಆರೋಪಿಸಿದರೆ, ಕೊಳವೆ ಬಾವಿಗಳ ಪಟ್ಟಿಗೆ ಒತ್ತಾಯಿಸಿ ಅವರೂ ಸೇರಿ ಅನೇಕ ಸದಸ್ಯರು ಸದನದ ಬಾವಿಗಿಳಿದಾಗ, ಪಟ್ಟಿ ಒದಗಿಸಲು ಸಮಯಾವಕಾಶ ಬೇಕೆಂಬ ಕೋರಿಕೆ ಮನ್ನಿಸಿ ಆಸನಗಳಿಗೆ ಹಿಂತಿರುಗಿದರು.

ಇಂದು ಕಳಿಸಬೇಕು: ರಾಷ್ಟ್ರೀಯ ಗ್ರಾಮೀಣ ಕುಡಿವ ನೀರು ಯೋಜನೆ ಮಾರ್ಗಸೂಚಿಗಳಂತೆ ಕ್ರಿಯಾಯೋಜನೆ ಸಿದ್ಧಪಡಿಸಬೇಕಿದೆ ಎಂದು ಹೇಳಿದ ಸಿಇಒ ಸಿ.ಸತ್ಯಭಾಮಾ, ಕುಡಿವ ನೀರು, ನೈರ್ಮಲ್ಯ ಗ್ರಾಪಂ ಸಮಿತಿಗಳ ಶಿಫಾರಸಿನಂತೆ ಸಿದ್ಧಪಡಿಸಿರುವ ಕ್ರಿಯಾಯೋಜನೆಯನ್ನು ಜಿಪಂ ಅಧ್ಯಕ್ಷರ ಅಧ್ಯಕ್ಷತೆ ಸಮಿತಿ ಪರಿಶೀಲಿಸಿದೆ. ಅದನ್ನು ಜೂನ್ 5ರೊಳಗೆ ರಾಜ್ಯ ಸಮಿತಿಗೆ ಕಳಿಸಬೇಕಿತ್ತು ಎಂದು ತಿಳಿಸಿದರು.

ಆದರೆ, 7ರಂದು ಕಳಿಸಲು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರ ಒಪ್ಪಿಗೆ ಪಡೆದಿದ್ದೇನೆ. ಎಲ್ಲೂ ನಾನು ಕಾನೂನು ಉಲ್ಲಂಘಿಸಿಲ್ಲ. ನಿಯಮ ಮೀರಿ ಕೊಳವೆಬಾವಿ ಕೊರೆಸಿರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೊಡಲಾಗಿದೆ. ನಿಯ ಮಗಳಡಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಈಗಲೂ ಗ್ರಾಪಂ ಸಮಿತಿ ಶಿಫಾರಸು ಗಮನಿಸಲು ಸದಸ್ಯರಿಗೆ ಅವಕಾಶವಿದೆ ಎಂದರು.

ಗ್ರಾಪಂ ಸಮಿತಿಗಳೆಡೆ ಶಂಕೆ: ಗ್ರಾಪಂ ಸಮಿತಿಗಳ ಸಭೆಗಳನ್ನೇ ಶಂಕಿಸಿದ ಕೃಷ್ಣಮೂರ್ತಿ, ಜಿಲ್ಲೆಯ 189 ಗ್ರಾಪಂಗಳಲ್ಲೂ ಪಿಡಿಒ ಅಧ್ಯಕ್ಷರು ಒಂದಾಗಿ ಕಾಮಗಾರಿ ಪಟ್ಟಿ ಕಳಿಸಿದ್ದಾರೆ ಹೊರತು ನೈಜ ಸಭೆಗಳಿಂದ ಶಿಫಾರಸು ಆಗಿಲ್ಲ, ನಡವಳಿಕೆಗಳೆಲ್ಲವೂ ಬೋಗಸ್ ಆಗಿದ್ದು, ಪಿಡಿಒಗಳ ವಿರುದ್ಧವೂ ಕ್ರಮ ಜರುಗಿಸಿ ಎಂದು ಸಿಇಒಗೆ ಸವಾಲೆಸೆದರು.

ಗ್ರಾ.ಕು.ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಮಂಜುನಾಥ್ ವಿರುದ್ಧ ಅನೇಕ ಸದಸ್ಯರು ಹರಿಹಾಯ್ದರು. ಹಿರಿಯೂರು ಎಇಇ ಆಗಿದ್ದಾಗಲೇ ಸಮಸ್ಯೆ ನಿವಾರಿಸಲಾಗದ ಅವರಿಗೆ ಹೇಗೆ ಪ್ರಭಾರ ಕೊಟ್ಟಿದ್ದೀರೆಂದು ಅಧ್ಯಕ್ಷರನ್ನು ಪ್ರಶ್ನಿಸಿದರು.

ಮಧ್ಯೆ ಪ್ರವೇಶಿಸಿದ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜನಪ್ರತಿನಿಧಿಗಳ ಶಿಫಾರಸಿನಂತೆ ಕೊಳವೆ ಬಾವಿ ಕೊರೆಸಲು ನಿರ್ಣಯಿಸಲಾಗಿತ್ತು. ಯಾರ‌್ಯಾರು ಶಿಫಾರಸು ಮಾಡಿದ್ದಾರೆ ಮಾಹಿತಿ ಕೊಡಿ ಎಂದರು.

ಕಳೆದ ಏಪ್ರಿಲ್ 1-31 ಮಾರ್ಚ್ 2019ರ ವರೆಗೆ ಕೊರೆಸಿರುವ 1667 ಕೊಳವೆಬಾವಿಗಳಲ್ಲಿ 1062 ಸೇರಿಲ್ಲ. ಇವುಗಳ ಬಿಲ್ ಪಾವತಿಗೆ ಚಿತ್ರದುರ್ಗ ತಾಲೂಕು ಹೊರತುಪಡಿಸಿ ಉಳಿದ ಐದು ತಾಲೂಕುಗಳಲ್ಲಿ ಎಸ್‌ಟಿಪಿ ಅನುದಾನ ಭರಿಸಲು ಸಾಧ್ಯವಿದೆ. ಇಲ್ಲವಾದಲ್ಲಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಆಗಬೇಕು ಎಂದು ತಿಳಿಸಿದರು.

ಬಿ.ಪಿ.ಪ್ರಕಾಶಮೂರ್ತಿ ಮಾತನಾಡಿ, ಒಳ್ಳೆಯ ಕೆಲಸ ಮಾಡುತ್ತಿರುವ ಸಿಇಒ ಕಾಲೆಳೆವುದು ಬೇಡ ಎಂದರು. ಸಭೆ ಕಾರ‌್ಯಸೂಚಿ ಸಕಾಲಕ್ಕೆ ತಲುಪಿಸಿಲ್ಲ ಎಂಬ ಆಕ್ಷೇಪಕ್ಕೆ ಸಿಪಿಒ ಶಶಿಧರ್ ನನ್ನಿಂದ ತಪ್ಪಾಗಿದೆ. ಮುಂದೆ ಈ ರೀತಿ ಆಗವುದಿಲ್ಲ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಮೂರ್ತಿ, ಮುಂಡ್ರಿಗಿ ನಾಗರಾಜ್, ಸದಸ್ಯರಾದ ಡಾ.ಬಿ.ಯೋಗೇಶ್ ಬಾಬು, ಸಿ.ಬಿ.ಪಾಪಣ್ಣ, ಆರ್.ಗೀತಾ, ಶಶಿಕಲಾ ಸುರೇಶ್‌ಬಾಬು, ಆರ್.ನರಸಿಂಹ್, ಕೆ.ಟಿ.ಗುರುಮೂರ್ತಿ, ಜಿ.ಟಿ.ಅಜ್ಜಪ್ಪ, ಚೇತನಾ ಪ್ರಸಾದ್, ಕೆ.ಸಿ.ಮಹೇಶ್ವರಪ್ಪ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಸುಶೀಲಮ್ಮ ಇದ್ದರು.

ಪರಿಶಿಷ್ಟರ ಮೀಸಲು ಅನುದಾನ ಖರ್ಚು-ವೆಚ್ಚ ವಿವರಕ್ಕೆ ಸೂಚನೆ: ಗ್ರಾಪಂಗಳಿಗೆ ಒದಗಿಸಿರುವ ಅನುದಾನದಡಿ ಎಸ್ಸಿ, ಎಸ್ಟಿಗೆ ಮೀಸಲಿರಿಸಿದ ಶೇ.22.75ರ ಅನುದಾನ ಖರ್ಚು-ವೆಚ್ಚಗಳ ವಿವರಗಳನ್ನು 15 ದಿನಗಳ ಒಳಗೆ ಸಲ್ಲಿಸುವಂತೆ ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜನ್, ತಾಪಂ ಇಒಗಳಿಗೆ ಸೂಚಿಸಿದರು.

ಚಿತ್ರದುರ್ಗ ತಾಪಂ ಮಾಹಿತಿಯಂತೆ ನಿಯಮಾನುಸಾರ ಅನುದಾನದಲ್ಲಿ ಶೇ.22.75 ಮೊತ್ತವನ್ನು ಮೀಸಲು ಇಟ್ಟಿಲ್ಲ. ಪರಿಶಿಷ್ಟರ ಕಲ್ಯಾಣಕ್ಕಾಗಿ ಅನುದಾನ ಮೀಸಲಿಡುವುದು ಹಾಗೂ ನಿಗದಿತ ಅವಧಿಯೊಳಗೆ ಖರ್ಚು ಮಾಡುವುದು ಕಡ್ಡಾಯ ಎಂದರು.

ಈ ವೇಳೆ ಮಾತನಾಡಿದ ಸದಸ್ಯರು, ಕಾಯ್ದೆ ಉಲ್ಲಂಘಿಸಿದ ಪಿಡಿಒಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದಾಗ 15 ದಿನಗಳ ಒಳಗೆ ಅಧಿಕಾರಿಗಳು ಮಾಹಿತಿ ಕೊಡದಿದ್ದರೇ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವ ಭರವಸೆ ಸಿಇಒ ನೀಡಿದರು.

ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಬಹುಗ್ರಾಮ ಯೋಜನೆಗಳನ್ನು ರೂಪಿಸುವುದು ಅಗತ್ಯವಿದೆ. ಕಳೆದ ವರ್ಷ ವಿವಿಧ ಇಲಾಖೆಗಳ ಅಕ್ರಮ ಆರೋಪಗಳ ತನಿಖೆಗೆ ರಚಿಸಿದ್ದ 4 ತನಿಖಾ ಸಮಿತಿಗಳು ವರದಿ ಸಲ್ಲಿಸಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *