ವಿಪತ್ತು ಸಂದರ್ಭದಲ್ಲಿ ಧೃತಿಗೆಡದಿರಿ

ಚಿತ್ರದುರ್ಗ: ಗುಂಟೂರಿನ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ಜಿಲ್ಲಾದ್ಯಂತ ಮಂಗಳವಾರದಿಂದ ಜುಲೈ 1 ರವರೆಗೆ ವಿಪ್ಪತ್ತು ನಿಯಂತ್ರಣ ಕುರಿತಂತೆ ಶಾಲಾ ಕಾಲೇಜು ಮತ್ತಿತರೆಡೆ ಜಾಗೃತಿ ಪ್ರಾತ್ಯಕ್ಷಿಕೆ ನಡೆಸಿಕೊಡಲಿದೆ.

ಮಂಗಳವಾರ ನಗರದ ಎಸ್‌ಆರ್‌ಎಸ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸಮುದಾಯ ಜಾಗೃತಿ ಕಾರ‌್ಯಕ್ರಮದಲ್ಲಿ ಆರೋಗ್ಯದಲ್ಲಿ ಏರುಪೇರು, ಪ್ರಥಮ ಚಿಕಿತ್ಸೆ, ರಾಸಾಯನಿಕಗಳ ಸೋರಿಕೆ, ಅಗ್ನಿ ಅವಘಡ, ವಿಕಿರಣಗಳ ಸೋರಿಕೆ ಪ್ರಕರಣ, ಶಾಲಾ ಸುರಕ್ಷತೆ ಬಗ್ಗೆ ಯೋಧರು ಸರಳ ಶೈಲಿಯಲ್ಲಿ ವಿವರಿಸಿದರು.

ಚಿತ್ರದುರ್ಗ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ್ ನಿಲೇಗಾರ್ ಮಾತನಾಡಿ, ವಿಪತ್ತು ಸಂದರ್ಭದಲ್ಲಿ ಧೃತಿಗೆಡದೆ ಚುರುಕಾಗಿ ಸಮಸ್ಯೆಗೆ ಪ್ರಾಥಮಿಕ ಪರಿಹಾರೋಪಾಯ ಕಂಡುಕೊಳ್ಳಲು ಪ್ರಯತ್ನಿಸಬೇಕು. ಅವಘಡಗಳಾದಾಗ ಉದ್ವಿಗ್ನಗೊಂಡರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದರು. ಪ್ರಾಚಾರ‌್ಯ ಪ್ರಭಾಕರ್ ಮಾತನಾಡಿದರು.

ಎಲ್ಲೆಲ್ಲಿ ಪ್ರಾತ್ಯಕ್ಷಿಕೆ?: ಜೂನ್ 19ರಂದು ನಗರದ ಮೈಲಾರಲಿಂಗೇಶ್ವರ ನರ್ಸಿಂಗ್ ಕಾಲೇಜು, 20ರಂದು ಗೃಹರಕ್ಷಕರಿಗೆ ಡಿಆರ್ ಮೈದಾನದಲ್ಲಿ, 21 ಬಾಯ್ಸ ಜೂನಿಯರ್ ಕಾಲೇಜು, 22 ಹೊಳಲ್ಕೆರೆ ಎಸ್‌ಜೆಎಂ ಕಾಲೇಜು, ಚಳ್ಳಕೆರೆ ಎಚ್‌ಟಿಟಿ ಗರ್ಲ್ಸ್ ಹೈಸ್ಕೂಲ್, 25 ಹೊಸದುರ್ಗದ ಕೆಲ್ಲೋಡು ಗ್ರಾಮ, 26 ಚಿತ್ರದುರ್ಗದ ವಿದ್ಯಾವಿಕಾಸ ಶಾಲೆ, 27 ಹೊಳಲ್ಕೆರೆ ವಾಗ್ದೇವಿ ಶಾಲೆ, 28 ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ 29 ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್.

ಕಮಾಂಡ್ ಸಬ್‌ಇನ್ಸ್‌ಪೆಕ್ಟರ್ ಕೆ.ಎಸ್.ಕೇಶವ ನೇತೃತ್ವದ 10 ನೇ ಬಿಎನ್ ಎನ್‌ಡಿಆರ್‌ಎಫ್‌ನ 25 ಯೋಧರು ಭಾಗವಹಿಸಲಿದ್ದಾರೆ. ಪ್ರಾತ್ಯಕ್ಷಿಕೆ ನಂತರ ತಂಡ ಜು.1ರಂದು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ಕೊಡಲಿದೆ.

Leave a Reply

Your email address will not be published. Required fields are marked *