ನಾಲ್ಕು ವರ್ಷ ಕತ್ತಲ ಕೋಣೆ ಶಿಕ್ಷೆ

ಚಿತ್ರದುರ್ಗ: ಕೌಟುಂಬಿಕ ಕಾರಣಕ್ಕೆ ನಾಲ್ಕು ವರ್ಷದಿಂದ ವ್ಯಕ್ತಿಯನ್ನು ಕುಟುಂಬಸ್ಥರೇ ಗೃಹ ಬಂಧನದಲ್ಲಿರಿಸಿದ್ದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ನಗರದ ಕೆಳಗೋಟೆಯ ಚಿಕ್ಕ ಕೊಠಡಿಯಲ್ಲಿ 56 ವರ್ಷದ ತಿಪ್ಪಾರೆಡ್ಡಿಯನ್ನು ಕೂಡಿ ಹಾಕಲಾಗಿತ್ತು. ಬೆಳಕನ್ನು ಸಹ ನೋಡದ ಇತ ಉದ್ದನೆಯ ಗಡ್ಡ ಬಿಟ್ಟುಕೊಂಡು ಸಾವು ಬದುಕಿನ ನಡುವೆ ದಿನ ಕಳೆದಿದ್ದಾನೆ. ನಾಲ್ಕು ವರ್ಷ ಕತ್ತಲಲ್ಲಿದ್ದರಿಂದ ಮಾನಸಿಕ ಅಸ್ವಸ್ಥನಾಗಿದ್ದಾನೆ.

ಸ್ಥಳೀಯರು ನೀಡಿದ ಮಾಹಿತಿ ಮೇಲೆ ಬಸವೇಶ್ವರ ವಿದ್ಯಾಸಂಸ್ಥೆ ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಧಾವಿಸಿ ತಿಪ್ಪೇಸ್ವಾಮಿಯನ್ನು ಬಂಧಮುಕ್ತಗೊಳಿಸಿದರು.

ಕೂಡಿ ಹಾಕಿದ್ದ ಮನೆ ಬಳಿ ಕವರ್‌ನಲ್ಲಿ ಊಟ ತಂದ ಮಹಿಳೆ ಅಧಿಕಾರಿಗಳನ್ನು ನೋಡುತ್ತಿದ್ದಂತೆ ಊಟ ಬಿಸಾಕಿ ಓಡಿ ಹೋಗಲು ಪ್ರಯತ್ನಿಸಿದಳು. ಬಳಿಕ ಮಹಿಳೆಯನ್ನು ಹಿಡಿದು ಪ್ರಶ್ನಿಸಿದಾಗ ನನಗೇನೂ ಗೊತ್ತಿಲ್ಲ, ಮನೆಯವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ತಪ್ಪಿಸಿಕೊಂಡಿದ್ದಾಳೆ. ಬಳಿಕ ಅಧಿಕಾರಿಗಳೇ ಚರ್ಚೆ ನಡೆಸಿ ಅಸ್ವಸ್ಥ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪೂರ್ಣಗೊಂಡ ಬಳಿಕ ಮಾಹಿತಿ ಪಡೆದು ಸಂಬಂಧಪಟ್ಟರ ಮೇಲೆ ಕ್ರಮ ಜರುಗಿಸಲು ಚಿಂತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ತಿಳಿಸಿದರು.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಟಿಎಚ್‌ಒ ಡಾ.ರೂಪಾ, ಮಹಿಳಾ ಸಹಾಯವಾಣಿ ಕೇಂದ್ರದ ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ಸುಶ್ರೂಕ ಮಲ್ಲಣ್ಣ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.