ಎಸ್‌ಡಿಎ ಹುದ್ದೆಗೆ ನೇಮಕಾತಿ ಪರೀಕ್ಷೆ

ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ನೇಮಕಾತಿ ಪರೀಕ್ಷೆ ನಡೆಯಿತು.

ಬೆಳಗ್ಗೆ 10 ರಿಂದ 11.30ರ ವರೆಗೆ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ 2ರಿಂದ 3.30ರ ವರೆಗೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್ ಪರೀಕ್ಷೆ ನಡೆದವು.

ಚಿತ್ರದುರ್ಗದ 26 ಮತ್ತು ಹಿರಿಯೂರಿನ 8 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 12,843 ಅಭ್ಯರ್ಥಿಗಳು ನೋಂದಾಯಿಸಿದ್ದರು. ಅದರಲ್ಲಿ ಬೆಳಗ್ಗೆ 4041, ಮಧ್ಯಾಹ್ನ 4,106 ಗೈರಾಗಿದ್ದರು. 72 ಅಂಗವಿಕಲರಲ್ಲಿ 58 ಅಭ್ಯರ್ಥಿಗಳು ಹಾಜರಾಗಿದ್ದರು.

ಜಿಲ್ಲಾಧಿಕಾರಿ ಸೂಚನೆಯಂತೆ ಪರೀಕ್ಷಾ ಕೇಂದ್ರಗಳಲ್ಲಿ ಕುಡಿವ ನೀರು, ಶೌಚಗೃಹ ಹಾಗೂ ವ್ಯವಸ್ಥಿತ ಆಸನದ ಸೌಲಭ್ಯ ಕಲ್ಪಿಸಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ವೀಡಿಯೋ ಚಿತ್ರೀಕರಣ ನಡೆಸಲಾಯಿತು.

ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು. ಕಂಪ್ಯೂಟರ್, ಇಂಟರ್‌ನೆಟ್ ಹಾಗೂ ಜೆರಾಕ್ಸ್ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದರು.

ಜಿಲ್ಲೆಯ ನಗರದ 34 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಡಿಎ ಹುದ್ದೆಗೆ ನೇಮಕಾತಿ ಪರೀಕ್ಷೆ ಸುಗಮವಾಗಿ ನಡೆಯಿತು. ಚಿತ್ರದುರ್ಗ, ಹಿರಿಯೂರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಡಿಡಿಪಿಐ ಎ.ಜೆ.ಆಂಥೋನಿ ಪತ್ರಿಕೆಗೆ ತಿಳಿಸಿದರು.

Leave a Reply

Your email address will not be published. Required fields are marked *